ಜಿಲ್ಲೆ

ಅನ್ನ, ಅಕ್ಷರ ದಾಸೋಹ ಮೂಲಕ ಸಮಾಜದ ಅಭಿವೃದ್ಧಿ

ಚಿತ್ರದುರ್ಗ: ಒಂಟಿಕಂಬದ ಮುರುಘಾಮಠ ಕ್ಷೇತ್ರದಲ್ಲಿ ಲಿಂ. ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಂಡಂಥ ಶಾಂತತೆ ಇಂದಿಗೂ ಮುಂದುವರಿದಿದೆ ಎಂದು ಚಿತ್ರದುರ್ಗ ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹೇಳಿದರು.

ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಶುಕ್ರವಾರ ಲಿಂ.ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ 31ನೇ ಸ್ಮರಣೋತ್ಸವ ಹಾಗೂ ಚಿನ್ಮೂಲಾದ್ರಿ ಚಿತ್ಕಳೆ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೂಜ್ಯರು 30 ವರ್ಷ ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಅಧ್ಯಾತ್ಮಿಕತೆ, ದಾಸೋಹದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿ ನಾಡಿನಾದ್ಯಂತ ಭಕ್ತಸಮೂಹ ಸೃಷ್ಟಿಸಿಕೊಂಡಿದ್ದರು. ಶ್ರೀಗಳು ಎಸ್‌ಜೆಎಂ ವಿದ್ಯಾಪೀಠದ ಮೂಲಕ ಸ್ಥಾಪಿಸಿದ ವಿದ್ಯಾಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿದೆ ಎಂದರು.

ಚಿನ್ಮೂಲಾದ್ರಿ ಚಿತ್ಕಳೆ ಬೃಹತ್ ಕೃತಿಯ ಪ್ರಧಾನ ಸಂಪಾದಕ ಪ್ರೊ.ಲಕ್ಷ್ಮಣ ತೆಲಗಾವಿ ಮಾತನಾಡಿ, ಮೊದಲನೇ ಆವೃತ್ತಿಯ 2000 ಪ್ರತಿಗಳು ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಖಾಲಿಯಾದವು. ಶ್ರೀಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಿದ್ದರಿಂದ 2ನೇ ಆವೃತ್ತಿಯಲ್ಲಿ ದಾಖಲಿಸಿ ಬಿಡುಗಡೆಗೊಳಿಸಲಾಗಿದೆ. 32ನೇ ವರ್ಷದ ಸ್ಮರಣೋತ್ಸವದಲ್ಲಿ ಇನ್ನೊಂದು ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್. ನವೀನ್, ಮಾಜಿ ಶಾಸಕ ಪಿ. ರಮೇಶ್, ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಡಾ.ಪಿ.ಎಸ್. ಶಂಕರ್, ದಾವಣಗೆರೆ ವಿರಕ್ತಮಠದ ಡಾ. ಶ್ರೀಬಸವಪ್ರಭು ಸ್ವಾಮೀಜಿ, ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿದರು.

ಲಕ್ಷ್ಮಣ್ ತೆಲಗಾವಿ ಪ್ರಧಾನ ಸಂಪಾದಕತ್ವ, ಕೆ.ಎಲ್. ರಾಜಶೇಖರ್ ಸಂಪಾದಕತ್ವದ ಚಿನ್ಮೂಲಾದ್ರಿ ಚಿತ್ಕ ಳೆ ಪರಿಷ್ಕೃತ ಮತು ವಿಸ್ತೃತ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕಳಸದ ಅವರು ಬಸವತತ್ತ್ವ ಧ್ಯಜಾರೋಹಣ ನೆರವೇರಿಸಿದರು. ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ, ಶರಣೆ ಸತ್ಯಕ್ಕ ಬೀದರ್, ಬೈರಮಂಗಲ ರಾಮೇಗೌಡ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಮಹಾಲಿಂಗ ಸ್ವಾಮೀಜಿ, ಶ್ರೀ ಬಸವ ಭಂಗೇಶ್ವರ ಸ್ವಾಮೀಜಿ, ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ಶ್ರೀ ಮರುಳಶಂಕರ ಸ್ವಾಮೀಜಿ, ಶ್ರೀ ಪೂರ್ಣಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಶರಣೆ ಮುಕ್ತಾಯಕ್ಕ ಸೇರಿ ಹರಗುರುಚರಮೂರ್ತಿಗಳು, ಎಲ್. ರಾಜಶೇಖರ್, ಕೆಇಬಿ ಷಣ್ಮುಖಪ್ಪ ಇತರರು ಇದ್ದರು.

ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಮುರುಗೇಶ್ ನಿರೂಪಿಸಿದರು.

ಕೋಟ್

---

ಅಜರಾಮರ

ಮಲ್ಲಿಕಾರ್ಜುನ ಶ್ರೀಗಳು ನಾಡಿನ ಬಹುದೊಡ್ಡ ಸಂಸ್ಥೆ(ಎಸ್‌ಜೆಎಂವಿದ್ಯಾಪೀಠ)ಯನ್ನು ಕಟ್ಟಿ ಬೆಳೆಸಿದವರು. ಮುರುಘಾಮಠ ಒಂದು ಜಾತಿಗೆ ಸೀಮಿತವಾಗಿಲ್ಲ. ಭೂಮಿ, ಸೂರ್ಯ, ಚಂದ್ರರು ಇರುವವರೆಗೂ ಶ್ರೀಗಳ ಹೆಸರು ಅಜರಾಮರವಾಗಿರುತ್ತದೆ. ಶ್ರೀಗಳು ಇಚ್ಛಾಮರಣಿಯಾದವರು. ಪೂಜ್ಯರ ಆಶೀರ್ವಾದದಿಂದ 5 ಬಾರಿ ಶಾಸಕನಾಗಿದ್ದೇನೆ.

ಡಾ.ಎಂ. ಚಂದ್ರಪ್ಪ, ಶಾಸಕ.

----

ಶಿಕ್ಷಣ ಸೂರ್ಯ

ಚಿನ್ಮೂಲಾದ್ರಿ ಚಿತ್ಕಳೆ ಗ್ರಂಥವನ್ನು ಮಲ್ಲಿಕಾರ್ಜುನ ಶ್ರೀಗಳ ಚಿತ್ರಣವನ್ನು ಕಣ್ತುಂಬಿ ಬರುವಂತೆ ರಚಿಸಲಾಗಿದೆ. ಶ್ರೀಗಳು ಮುರುಘಾಮಠದ ಕೀರ್ತಿಯನ್ನು ಎತ್ತಿ ಹಿಡಿದವರಾಗಿದ್ದಾರೆ. ಅವರನ್ನು ಶಿಕ್ಷಣ ಸೂರ್ಯ ಎಂದು ಕರೆದರೆ ತಪ್ಪಾಗಲಾರದು. ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವುದು ಅವರ ಗುರಿಯಾಗಿತ್ತು. ಶ್ರೀಗಳು ಮಧ್ಯಕರ್ನಾಟಕದ ಶಿಕ್ಷಣ ಕ್ಷೇತ್ರದ ಹರಿಕಾರ.

ಕೆ.ಎಸ್. ನವೀನ್, ಎಂಎಲ್‌ಸಿ.

----