ಮೈಸೂರು: ಕೆಲ ದಿನಗಳ ಹಿಂದೆ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಿದ್ದ ಸ್ಥಳವೀಗ ಸ್ಥಳೀಯ ಮಕ್ಕಳು, ಹಿರಿಯರು ಸಂತೋಷದಿಂದ ವಿರಮಿಸುವ ತಾಣವಾಗಿ ಮಾರ್ಪಟ್ಟಿದೆ.
ಗೋಕುಲಂನ ಕೆಆರ್‌ರಸ್ತೆಯ ಜಂಕ್ಷನ್‌ನ ಒಂದು ಮೂಲೆಯಲ್ಲಿ ರಾಶಿಗಟ್ಟಲೆ ಕಸ ತಂದು ಸುರಿಯುತ್ತಿರುವುದರನ್ನು ಗಮನಿಸಿದ ನಗರಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು ಅವರು, ಇಲ್ಲಿ ಕಸ ಸುರಿಯಬೇಡಿ ಎಂದು ಮನವಿ ಮಾಡಿದ್ದರು.
ದೇಶಾದ್ಯಂತ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಮೈಸೂರು ಪಾಲ್ಗೊಂಡಿದೆ. ಈ ಅಭಿಯಾನದಲ್ಲಿ ನಮ್ಮ ನಗರ ದೇಶದಲ್ಲಿಯೇ ಮೊದಲ ಸ್ಥಾನ ದೊರೆಯಬೇಕಾದರೆ ನಗರದಲ್ಲಿ ಸ್ಥಳೀಯರು ಸ್ವಚ್ಛತೆ ಕಾರ್ಯಕ್ಕೆ ಹೇಗೆ ಸಹಕರಿಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಇಲ್ಲಿ ಕಸದ ರಾಶಿ ಇದ್ದರೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೂ ಯಾವುದೇ ಪ್ರಯೋಜನವಾಗದೇ ಯಥಾಸ್ಥಿತಿ ಮುಂದುವರಿದಿತ್ತು.
ಈಗ ಆ ಸ್ಥಳವನ್ನು ಎಸ್‌ಬಿಎಂ ಮಂಜು ಅವರು ಸಾರ್ವಜನಿಕರು ಕುಳಿತು ವಿರಮಿಸುವ ವಿಶೇಷ ತಾಣವಾಗಿ ಪರಿವರ್ತಿಸಿ ಮಂಗಳವಾರ ಉದ್ಘಾಟನೆ ಮಾಡಿಸಿದ್ದಾರೆ. ಶಾಸಕ ಹರೀಶ್‌ಗೌಡ ತಾಣವನ್ನು ಉದ್ಘಾಟಿಸಿದ್ದಾರೆ.
ಪಾಲಿಕೆ ಸದಸ್ಯರ ಈ ನಡೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಸ ಹಾಕುತ್ತಿದ್ದ ಜಾಗದಲ್ಲಿ ಕುಳಿತುಕೊಳ್ಳಲು ಆಸನ, ಮಕ್ಕಳು ಆಟವಾಡಲು ಸ್ಥಳಾವಕಾಶ, ಗೋಡೆಯ ಮೇಲೆ ಚಿತ್ತಾಕರ್ಷಕ ಚಿತ್ರಗಳು ಮೂಡಿಬಂದಿವೆ.
ಬೃಂದಾವನ ಬಡಾವಣೆಯಲ್ಲಿಯೂ ಒಂದು ಜಾಗದಲ್ಲಿ ಇದೇ ರೀತಿ ಕಸ ಹಾಕುತ್ತಿದ್ದ ಸ್ಥಳವನ್ನು ಆಕರ್ಷಕ ತಾಣವಾಗಿ ಪರಿವರ್ತಿಸಲಾಗಿದೆ. ಇದೇ ರೀತಿ ಉಳಿದ ಬಡಾವಣೆಗಳಲ್ಲಿಯೂ ಬದಲಾವಣೆ ತರಲಾಗುತ್ತಿದೆ ಎಂದು ಎಸ್‌ಬಿಎಂ ಮಂಜು ತಿಳಿಸಿದರು.
ಜನರೇ ಈ ಜಾಗವನ್ನು ಕಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರು ಪೇಪರ್ ಓದುತ್ತಾರೆ. ಮಕ್ಕಳು ಆಟವಾಡುತ್ತಾರೆ. ಒಟ್ಟಾರೆ ಕಸ ಹಾಕಲು ಮನಸ್ಸು ಬಾರದಂತೆ ಮಾಡಲಾಗಿದೆ. ಇದರಿಂದ ನಮ್ಮ ಉದ್ದೇಶ ಈಡೇರಿಕೆಯಾಗಿದೆ. ಜನರಿಗೂ ಅನುಕೂಲವಾಗಿದೆ ಎಂದು ಹೇಳಿದರು.