ಜಿಲ್ಲೆ

ಅನೈತಿಕ ಚಟುವಟಿಕೆಗಳ ತಾಣವಾದ ಮೈದಾನ

ಬಿ.ಎಲ್.ಲಕ್ಷ್ಮಣ್ ಬೇಲೂರು

ಕ್ರೀಡಾಪಟುಗಳ ಅನುಕೂಲಕ್ಕಾಗಿ ನಿರ್ಮಿಸಿರುವ ತಾಲೂಕು ಕ್ರೀಡಾಂಗಣದಲ್ಲಿ ಕೆಲ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಕ್ರೀಡಾಂಗಣದ ರನ್ನಿಂಗ್ ಟ್ರಾೃಕ್‌ನಲ್ಲಿ ವಾಹನ ಚಲಾಯಿಸುವುದಲ್ಲದೆ, ಮದ್ಯ ಕುಡಿದು ವಾತಾವರಣವನ್ನು ಹಾಳು ಮಾಡುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಬೇಲೂರು ಪಟ್ಟಣ ಸಮೀಪದ ಎಸ್.ಸೂರಾಪುರ-ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಹೊಂದಿಕೊಂಡಂತಿರುವ ತಾಲೂಕು ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಹೇಳ ತೀರದಾಗಿದೆ. 25 ವರ್ಷಗಳಿಂದ ನಿರಂತರವಾಗಿ ಬೇಲೂರು ತಾಲೂಕಿನಿಂದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹೆಸರು ತಂದಿದ್ದಾರೆ. ಯುವ ಸಮುದಾಯಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪಟ್ಟಣದ ಕೂಗಳತೆ ದೂರದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಹೆಚ್ಚಿನ ಸೌಕರ್ಯ ಇಲ್ಲದಿದ್ದರೂ ಕೂಡ ಸಾಕಷ್ಟು ಜನರು ಇದೇ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಾರೆ.

ಬೆಳಗ್ಗೆ ಸಂಜೆ ಸಾಕಷ್ಟು ಜನರು ಇದೇ ಕ್ರೀಡಾಂಗಣವನ್ನು ವಾಯುವಿಹಾರಕ್ಕೆ ಬಳಸುತ್ತಾರೆ. ಕ್ರೀಡಾಂಗಣದ ಸುತ್ತಲೂ ವಿದ್ಯುತ್ ದೀಪಗಳಿಲ್ಲದ ಕಾರಣ ರಾತ್ರಿ ಸಮಯದಲ್ಲಿ ಕೆಲವರು ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮದ್ಯ, ಮಾಂಸವನ್ನು ಕ್ರೀಡಾಂಗಣದಲ್ಲೇ ಸೇವಿಸಿ ಬಾಟಲಿಯನ್ನು ಅಲ್ಲೇ ಬಿಟ್ಟು ತೆರಳುತ್ತಿರುವುದು ಸಾರ್ವಜನಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಸಂಬಂಧ ಪಟ್ಟವರು ಗಮನಿಸಿ ಕ್ರೀಡಾಂಗಣ ರಕ್ಷಣೆಗೆ ರಾತ್ರಿ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಅಥವ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕ್ರೀಡಾಂಗಣಕ್ಕೆ ಮೂಲ ಸೌಕರ್ಯ ಕಲ್ಪಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಅನುವು ಮಾಡಿಕೊಡಲು ಕ್ಷೇತ್ರದ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆ ಕ್ರಮವಹಿಸದಿದ್ದಲ್ಲಿ ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು, ಕ್ರೀಡಾಪಟುಗಳು ಒಳಗೂಡಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ಮದ್ಯ ಸೇವನೆ ಹಾಗೂ ಅನೈತಿಕ ಚಟುವಟಿಕೆ: ಬೇಲೂರು ತಾಲೂಕಿನ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ಕೆಲ ವರ್ಷಗಳ ಹಿಂದೆ ಎಸ್.ಸೂರಾಪುರ ಸಮೀಪ ಕ್ರೀಡಾಂಗಣ ನಿರ್ಮಿಸಲಾಗಿತ್ತು. ನಂತರದಲ್ಲಿ ಅದು ನನೆಗುದಿಗೆ ಬಿದ್ದು, ಕೆಲ ತಿಂಗಳ ಹಿಂದೆ ಶಾಸಕ ಎಚ್.ಕೆ.ಸುರೇಶ್ ಅವರ ಬಳಿ ಸಾರ್ವಜನಿಕರು ಮನವಿ ಸಲ್ಲಿಸಿ ಕ್ರೀಡಾಂಗಣದ ಅಭಿವೃದ್ಧಿಗೆ ಒತ್ತಾಯಿಸಿದರಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕೆಲ ಕಿಡಿಗೇಡಿಗಳು ಕ್ರೀಡಾಂಗಣವನ್ನು ಮದ್ಯ ಸೇವನೆ ಹಾಗೂ ಅನೈತಿಕ ಚಟುವಟಿಕೆಗೆ ಬಳಕೆಮಾಡಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.