ನಾಗಮಂಗಲ: ಸ್ವಾತಂತ್ರ್ಯ ಸಿಕ್ಕ ನಂತರ ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲಸೌಕರ್ಯಗಳೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಹಲವು ಮೈಲುಗಳನ್ನು ಕಂಡಿರುವ ಭಾರತ ಅನೇಕ ಸಾಧನೆಗಳಿಗೆ ಸಾಕ್ಷಿಯಾಗಿದೆ ಎಂದು ತಹಸೀಲ್ದಾರ್ ನಯೀಂ ಉನ್ನೀಸಾ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇತಿಹಾಸವು ನಮಗೆ ಅನೇಕ ವಿಷಯಗಳನ್ನು ತಿಳಿಸುತ್ತದೆ. ಅವುಗಳಿಂದ ಪಾಠ ಕಲಿತು ಭವಿಷ್ಯದ ಹಾದಿಯಲ್ಲಿ ನಡೆದಾಗ ಮಾತ್ರ ಗುರಿಯನ್ನು ಯಶಸ್ವಿಯಾಗಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಮಹತ್ವ ಕುರಿತು ಮೈಲಾರಪಟ್ಟಣ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಎಂ.ಮಂಜುನಾಥ್ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮೊದಲು ಪಟ್ಟಣದ ತಾಲೂಕು ಆಡಳಿತ ಸೌಧದಿಂದ ತಾಲೂಕು ಕ್ರೀಡಾಂಗಣದವರೆಗೆ ಶಾಲಾ ಮಕ್ಕಳೊಂದಿಗೆ ಭಾರತಾಂಬೆಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ತಾಪಂ ಇಒ ಚಂದ್ರಮೌಳಿ, ಡಿವೈಎಸ್‌ಪಿ ಲಕ್ಷ್ಮೀ ನಾರಾಯಣಪ್ರಸಾದ್, ಸಿಪಿಐ ನಿರಂಜನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ.ಸುರೇಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್, ಪಿಎಸ್‌ಐ ಅನ್ನಪೂರ್ಣ ಇತರರಿದ್ದರು.