ಜಿಲ್ಲೆ

ಅನೇಕ ಯೋಜನೆ ಜಾರಿ ತಂದು ಕಲ್ಯಾಣ ಕಾರ್ಯಕ್ರಮ ಅನುಷ್ಠಾನಕ್ಕೆ

ಕೊಳ್ಳೇಗಾಲ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಗಣ್ಯರು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಎಸ್.ಜಯಣ್ಣ, ಮಂಜುಳಾ, ಸೋಮೆಗೌಡ, ಶ್ರೀನಿವಾಸ್, ಮಂಜುಳಾ, ಡಾ.ದೇವರಾಜು, ಶಿವರಾಜು ಇತತರು ಇದ್ದರು.

ಕೊಳ್ಳೇಗಾಲ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಪ್ರಧಾನಿ ಇಂಧಿರಾಗಾಂಧಿ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು ಜನ ಕಲ್ಯಾಣ ಮಾಡಿದ್ದರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಮರಿಸಿದರು.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಕರಿಯಲಾಗುವ ದೇವರಾಜ ಅರಸು ಅವರು ಸೂರಿಲ್ಲದವರಿಗೆ ಸೂರು, ಉಳುವವನೇ ಭೂಮಿ ಒಡೆಯ , ವಿದ್ಯಾರ್ಥಿ ವೇತನ ಹೀಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಆದಿಯಲ್ಲಿಯೇ ಇಂದು ಸಿಎಂ ಸಿದ್ದರಾಮಯ್ಯ ಅವರು ನಡೆಯುತ್ತಿದ್ದಾರೆ. ಡಿ.ದೇವರಾಜು ಅರಸು ಅವರ ದಕ್ಷ, ಪ್ರಾಮಾಣಿಕ ಆಡಳಿತ ಎಲ್ಲ ರಾಜಕರಣಿಗಳಿಗೂ ಆದರ್ಶವಾಗಿದೆ. ನಮ್ಮ ತಂದೆ ಬಿ.ರಾಚಯ್ಯ ಅವರು ಹಾಗೂ ಡಿ.ದೇವರಾಜು ಅರಸು ಅವರು ರಾಜಕೀಯವಾಗಿ ಹೊಂದಾಣಿಕೆ ವ್ಯಕ್ತಿತ್ವ ಹೊಂದಿದ್ದರು ಎಂದು ಸ್ಮರಿಸಿದರು.


ಮುಖ್ಯ ಭಾಷಣಕಾರರಾದ ಚಾಮರಾಜನಗರ ಸರ್ಕಾರಿ ವಸತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಕರ್ನಾಟಕದ ಅಭ್ಯುದಯಕ್ಕೆ ಡಿ.ದೇವರಾಜ ಅರಸು ಅವರು ಶ್ರಮಿಸಿದ್ದಾರೆ. 6 ಭಾರಿ ಶಾಸಕರಾಗಿ, ರಾಜ್ಯದ ಮುಖ್ಯ ಮಂತ್ರಿಗಳಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದುರ್ಬಲ ಸಮುದಾಯಗಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುನ್ನಡೆಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದಾರೆ ಎಂದರು.


ಮಾಜಿ ಶಾಸಕ ಎಸ್.ಜಯಣ್ಣ, ತಹಸಿಲ್ದಾರ್ ಮಂಜುಳಾ, ಡಿವೈಎಸ್ಪಿ ಜಿ.ಯು.ಸೋಮೆಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ತಾ.ಪಂ ಇಒ ಶ್ರೀನಿವಾಸ್, ತಾಲೂಕು ಹಿಂದು ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವರಾಜು, ನಗರಸಭಾ ಪ್ರಭಾರ ಪೌರಾಯುಕ್ತ ಪ್ರಸನ್ನ ಕುಮಾರ್ ಇದ್ದರು.