ಜಿಲ್ಲೆ

ಅನುವಾದ ಪರಂಪರೆಯ ನೆಲ ಮೈಸೂರು: ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರರಾವ್

ಮೈಸೂರು: ಮೈಸೂರು ಅನುವಾದ ಪರಂಪರೆಯ ನೆಲ ಎಂದು ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರರಾವ್ ಬಣ್ಣಿಸಿದರು.

ಅಭಿರುಚಿ ಪ್ರಕಾಶನದ ವತಿಯಿಂದ ಪ್ರೊ.ಓ.ಎಲ್.ನಾಗಭೂಷಣ್ ಸ್ವಾಮಿ ಅನುವಾದಿಸಿರುವ ಫ್ಯೊದೋರ್ ದಾಸ್ತೋವ್ಸ್‌ಕಿಯ ಅವರ ‘ಅಪರಾಧ ಮತ್ತು ಶಿಕ್ಷೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಅವರಿಂದ ಹಿಡಿದು ಅನೇಕ ಮಹನೀಯರು ಅನುವಾದ ಸಾಹಿತ್ಯಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಇದರಿಂದ ಅನುಸೃಷ್ಟಿ ಪರಂಪರೆ ನೆಲೆಬೀಡು ಮೈಸೂರು ಎಂದರು.

ಅನುವಾದ ಸಣ್ಣ ಕೆಲಸವಲ್ಲ. ಅದು ಕ್ಲಿಷ್ಟಕರ ಕೆಲಸ. ಪ್ರತಿ ಅನುವಾದವೂ ಕೃತಿಯ ಮರುವ್ಯಾಖ್ಯಾನವೇ. ತರ್ಜುಮೆಗೆ ಕೊನೆಯೇ ಇಲ್ಲ. ಮೂಲ ಕೃತಿಯ ಮರು ಹುಟ್ಟು ಅದು. ಇದರಿಂದ ಮೂಲ ಕೃತಿಗೆ ವಿವಿಧ ಅವತಾರ ದೊರೆಯುತ್ತದೆ.

ಭಾವಾನುವಾದಕ್ಕೆ ದೇಶ, ಕಾಲ ಇರಲ್ಲ. ಹಳೇ ಕೃತಿಯನ್ನೂ ಅದು ಪ್ರಸ್ತುತಗೊಳಿಸುತ್ತದೆ. ಮತ್ತೊಂದು ಪ್ರದೇಶಕ್ಕೂ ಸಮೀಕರಿಸಿ ಓದುಗರನ್ನು ತಲುಪುತ್ತದೆ. ಹೀಗಾಗಿ, ರಷ್ಯಾದಲ್ಲಿ ರಚನೆಯಾದ ಕಥಾ ಸಾಹಿತ್ಯದ ಮೆರುಗು ಹೆಚ್ಚು. ಅದು ಬರವಣಿಗೆ ಲೋಕದಲ್ಲೇ ವಿಶೇಷ ಸ್ಥಾನ ಪಡೆದಿದೆ. ಅಲ್ಲಿಯ ಪ್ರಮುಖ ಕೃತಿಗಳು ಅನೇಕ ಭಾಷೆಗಳಿಗೆ ತುರ್ಜುಮೆಯಾಗಿ ಓದುಗರ ಮನತಟ್ಟಿವೆ ಎಂದರು.

ರಷ್ಯಾದ ಹೆಸರಾಂತರ ಸಾಹಿತಿಗಳಾದ ಟಾಲ್ಸ್‌ಟಾಯ್ ಮತ್ತು ದಾಸ್ತೋವ್ಸ್‌ಕಿಯ ಕಾದಂಬರಿಗಳು ಏಕಕಾಲದಲ್ಲಿ ಒಂದೇ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಇಬ್ಬರು ಎರಡೂ ಬೇರೆ ಲೋಕಗಳನ್ನು ಪ್ರತಿನಿಧಿಸುತ್ತಿದ್ದರು. ರಷ್ಯಾದಲ್ಲಿ ಅನುಭವಿಸಿದ ಬದುಕು ನಮ್ಮ ದೇಶದ್ದು, ಲೋಕದ್ದು ಆಗಿದ್ದು ವಿಶೇಷ.

ಭಾರತದ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಕಾದಂಬರಿ ಇಲ್ಲದ ಕಾಲದಲ್ಲಿ ದಾಸ್ತೋವ್ಸ್‌ಕಿಯ, ಟಾಲ್ಸ್‌ಟಾಯ್ ಬರೆಯುತ್ತಿದ್ದರು. ನವೋದಯ ಮತ್ತು ನವ್ಯ ಕಾಲದ ಬರಹಗಾರರಿಗೆ ಟಾಲ್ಸ್ ಟಾಯ್ ಪ್ರಭಾವಿತರಾದಷ್ಟು ದಾಸ್ತೋವ್ಸ್‌ಕಿಯ ಪ್ರಭಾವಿಸಲಿಲ್ಲ. ಟಾಲ್ಸ್‌ಟಾಯ್‌ನಂತೆ ದಾಸ್ತೋವ್ಸ್‌ಕಿಯ ಅವರನ್ನು ಒಳಗು ಮಾಡಿಕೊಳ್ಳಲಿಲ್ಲ. ಈ ಕುರಿತು ಯೋಚಿಸಬೇಕಿದೆ ಎಂದು ಹೇಳಿದರು.

ಕೃತಿಕಾರ, ಲೇಖಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿ, ಈ ಕೃತಿಗೆ ‘ದಾಟು ಮತ್ತು ಉಲ್ಲಂಘನೆ’ ಎಂದು ಹೆಸರಿಡಲು ಇಚ್ಛಿಸಿದ್ದೆ. ಕೊನೆಗೆ ಮೂಲ ಕೃತಿಯ ಹೆಸರನ್ನೇ ಭಾಷಾಂತರಿಸಿ ಎಲ್ಲರಿಗೂ ಅರ್ಥವಾಗುವಂತೆ ‘ಅಪರಾಧ ಮತ್ತು ಶಿಕ್ಷೆ’ ಎಂದು ಹೆಸರಿಟ್ಟಿರುವೆ.

ಪ್ರತಿಯೊಬ್ಬರು ಜೀವನದಲ್ಲಿ ಅನೇಕ ಉಲ್ಲಂಘನೆ ಮಾಡುತ್ತಾರೆ. ಬಳಿಕ ತೊಳಲಾಡುತ್ತಾರೆ. ಅದೇ ಚಿತ್ರಣ ಈ ಕೃತಿಯಲ್ಲೂ ಇದೆ. ಇದರೊಂದಿಗೆ ರಾಜಕೀಯ, ತತ್ವಶಾಸ್ತ್ರ, ಧರ್ಮದ ವಿಷಯವನ್ನೂ ಕಟ್ಟಿಕೊಡಲಾಗಿದೆ ಎಂದರು.

ದಾಸ್ತೋವ್ಸ್‌ಕಿಯ ಅಪರಾಧ ಮತ್ತು ಶಿಕ್ಷೆ ಕಾದಂಬರಿಯನ್ನು 1972ರಲ್ಲಿ ಮೊದಲ ಬಾರಿ ಓದಿದಾಗ ಜ್ವರ ಬಂದಿತು. 50 ವರ್ಷ ಕಾಡಿದ ಕೃತಿ ಇದು. ವಿದ್ಯಾರ್ಥಿಯೊಬ್ಬ ಗಿರಿವಿ ಅಂಗಡಿಯಲ್ಲಿ ಬಡ್ಡಿ ವ್ಯವಹಾರನಿರತ ಮಹಿಳೆಯನ್ನು ಕೊಲೆ ಮಾಡುವ ಸರಳವಾದ ಕತೆ.

ಈ ನಿರೂಪಣೆಯಲ್ಲಿ ಮನುಷ್ಯ ಎಂತೆಂಥ ಯೋಚನೆ ಮಾಡಬಹುದು. ಯಾವ್ಯಾವ ಕನಸು ಬೀಳಬಹುದು. ವಿವಿಧ ಸಂಗತಿಗಳ ಬಗ್ಗೆ ಸಾವಿರಾರು ವಿವರ ಕೊಟ್ಟು ಓದುಗರ ಗಮನಿಸುವಂತೆ ಮಾಡುವುದು ದಾಸ್ತೋವ್ಸ್‌ಕಿಯ ಗುಣ ಎಂದರು.

ಭಾವುಕತೆ, ಮನಕಲುಕುವ ವಿಷಯವನ್ನು ಬಹುತೇಕ ಕೃತಿಯ ಸಾರವಾಗಿರುತ್ತದೆ. ಆದರೆ, ಮನುಷ್ಯ ಪ್ರಶ್ನೆಗಳು ಕಡಿಮೆ ಇರುತ್ತದೆ. ಈ ಕೃತಿಯಲ್ಲಿ ಈ ಪ್ರಶ್ನೆಗಳ ಹುಡುಕಾಟ ಇದೆ ಎಂದರು.

ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಮಾತನಾಡಿ, ಆಧುನಿಕ ಪ್ರಪಂಚ ಮುಂದಕ್ಕೆ ಹೋಗುತ್ತಿರುವಂತೆಯೇ ಹಿಂದಕ್ಕೆ ತಳ್ಳುತ್ತಿದೆ. ಶೇ.70ರಷ್ಟು ಜನರು ವಿಚಲಿತರಾಗುತ್ತಿದ್ದಾರೆ. ಭವಿಷ್ಯದಲ್ಲಿ ಅವರು ವಿವಿಧ ಕಷ್ಟಗಳಿಗೆ ಸಿಲುಕುವುದು ಸ್ಪಷ್ಟವಾಗುತ್ತಿದೆ ಎಂದರು. ಪ್ರಕಾಶಕ ಅಭಿರುಚಿ ಗಣೇಶ್ ಇದ್ದರು.