ಚಿಕ್ಕಮಗಳೂರು: ಪೊಲೀಸ್ ಇಲಾಖೆ ಅನುಮತಿ ಪಡೆಯದೆ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ಚಿಕ್ಕಮಗಳೂರಲ್ಲಿ ಮಂಗಳವಾರ ಮೆರವಣಿಗೆ ನಡೆಸುತ್ತಿದ್ದ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳನ್ನು ಪೊಲೀಸ್ ಅಧಿಕಾರಿಗಳು ತಡೆದು ನಿಲ್ಲಿಸಿದರು.
ತಾಲೂಕು ಕಚೇರಿಯಿಂದ ಹಲವು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತ ಎಂಜಿ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಅನುಮತಿ ಪಡೆಯದೆ ಮೆರವಣಿಗೆ ಮಾಡುವುದು ಕಾನೂನು ಉಲ್ಲಂಘನೆ. ಆಜಾದ್ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಅನುಮತಿ ಪಡೆದು ಮೆರವಣಿಗೆ ನಡೆಸುತ್ತಿರುವುದು ಸರಿಯಲ್ಲ ಎಂದು ಡಿವೈಎಸ್ಪಿ, ವೃತ್ತ ನಿರೀಕ್ಷಕರು, ಪೊಲೀಸ್ ಸಿಬ್ಬಂದಿ ತಡೆದರು.
ಮೆರವಣಿಗೆಯಲ್ಲಿದ್ದ ಬಹುತೇಕರು ಪ್ಲೇಕಾರ್ಡ್, ಬ್ಯಾನರ್ಗಳನ್ನು ಮುಚ್ಚಿ ನೇರವಾಗಿ ಆಜಾದ್ ವೃತ್ತಕ್ಕೆ ತೆರಳಿದರೆ ಮತ್ತೆ ಕೆಲವರು ಮಾತ್ರ ಬ್ಯಾನರ್ ಹಿಡಿದು ಘೊಷಣೆ ಕೂಗುತ್ತ ಮುಂದೆ ಸಾಗಿದರು. ಮೆರವಣಿಗೆಗೆ ಅನುಮತಿ ಪಡೆಯದ ಕಾರಣ ಕಾನೂನು ಉಲ್ಲಂಘನೆ ಕೇಸ್ ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.
ಆಜಾದ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮಾನವ ಸರಪಳಿ ನಿರ್ವಿುಸಿ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಕರಾವಳಿ ಭಾಗದಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜನಪ್ರತಿನಿಧಿಗಳು ಪ್ರಚೋದನಾಕಾರಿ ಹೇಳಿಕೆ ನೀಡುತ್ತ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದ್ದಾರೆ. ಹತ್ಯೆಯಾದವರ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲದಂತಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ 25 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಆದರೆ ಮಸೂದ್ ಮತ್ತು ಫಾಜಿಲ್ ಕುಟುಂಬಕ್ಕೆ ಪರಿಹಾರ ನೀಡುವುದಿರಲಿ ಸಾಂತ್ವನ ಹೇಳಲೂ ಮುಂದಾಗದಿರುವುದು ಸರಿಯಲ್ಲ. ಜನಪ್ರತಿನಿಧಿಗಳು ಚುನಾವಣೆಯಲ್ಲಿ ಮಾತ್ರ ಪಕ್ಷ ಪರಿಗಣಿಸಬೇಕು. ನಂತರ ಅದು ಜನರ ಸರ್ಕಾರವಾಗಬೇಕು. ಧರ್ಮಗಳ ನಡುವೆ ತಾರತಮ್ಯ ಮಾಡುವುದು ಒಳ್ಳೆಯದಲ್ಲ. ಎಲ್ಲ ಕುಟುಂಬಗಳಿಗೂ ಸಮಾನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.