ಮೈಸೂರು: ನಗರ ಪ್ರದೇಶದಲ್ಲಿದಲ್ಲಿ ಇನ್ನು ಮುಂದೆ ಅನುಮತಿ ಇಲ್ಲದೆ ಬಡಾವಣೆ, ವಿಲ್ಲಾ, ಅರ್ಪಾಟ್‌ಮೆಂಟ್ ನಿರ್ಮಿಸಿದರೆ ದಂಡದ ಜತೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ (ರೇರಾ) ಕಾರ್ಯದರ್ಶಿ ಇಬ್ರಾಹಿಂ ಮೈಗೂರ್‌ಎಚ್ಚರಿಸಿದರು.
ಕ್ರೆಡಾಯ್ ಮತ್ತು ಬಿಲ್ಡರ್ಸ್ ಅಸೋಸಿಯೇಷನ್‌ನಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ (ರೇರಾ) ಕಾಯ್ದೆ ಕುರಿತ ಒಂದು ದಿನದ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಖಾಸಗಿಯವರು, ಸಂಘ, ಸಂಸ್ಥೆಗಳು ಮಾತ್ರವಲ್ಲದೆ ನಗರಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಯಾರಾದರೂ 500 ಚದರಕ್ಕಿಂತ ಹೆಚ್ಚಿನ ಅಳತೆಯ ಅಪಾರ್ಟ್‌ಮೆಂಟ್, ವಿಲ್ಲಾ, ಬಡಾವಣೆ ನಿರ್ಮಿಸಬೇಕಾದರೆ ಕಡ್ಡಾಯವಾಗಿ ರೇರಾ ಅನುಮತಿ ಪಡೆದುಕೊಳ್ಳಬೇಕು. ಯಾರಾದರೂ ರೇರಾ ಕಾಯ್ದೆ ಉಲ್ಲಂಘನೆ ಮಾಡಿದರೆ ನಿಯಮದ ಪ್ರಕಾರ ದಂಡ ಹಾಗೂ 3 ವರ್ಷದವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದಂತೆ ಯಾವುದೇ ಕಾನೂನಿನ ಭದ್ರತೆ ಇರಲಿಲ್ಲ. ಇದರಿಂದ ಅನೇಕ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದವು. ಇದನ್ನು ಮನಗಂಡ ಕೇಂದ್ರ ಸರ್ಕಾರ ರೇರಾ ಕಾಯ್ದೆ ಜಾರಿಗೊಳಿಸಿ ರಿಯಲ್ ಎಸ್ಟೇಟ್‌ಗೆ ಕಾನೂನಿನ ಬಲ ನೀಡಲಾಗಿದೆ ಎಂದು ಹೇಳಿದರು.
ನೂತನ ಕಾಯ್ದೆ ಪ್ರಕಾರ ವಿಲ್ಲಾ, ನಿವೇಶನ, ಅಪಾರ್ಟ್‌ಮೆಂಟ್ ಕೊಳ್ಳುವವರು ಹಾಗೂ ಮಾರುವವರಿಗೆ ಅನುಕೂಲವಾಗಿದೆ. ಕೊಳ್ಳುವವರಿಗೆ ರಿಯಲ್ ಎಸ್ಟೇಟ್‌ದಾರರು ನಿಗದಿತ ಸಮಯದಲ್ಲಿ ಒಪ್ಪಿಕೊಂಡಿದ್ದ ಮನೆ, ನಿವೇಶನವನ್ನು ನೀಡಬೇಕು. ರಿಯಲ್ ಎಸ್ಟೇಟ್‌ದಾರರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಆಸ್ತಿ ಕೊಳ್ಳುವವರು ನಡೆದುಕೊಳ್ಳಬೇಕು. ಉಲ್ಲಂಘನೆಯಾದರೆ ರೇರಾಗೆ ದೂರು ನೀಡಬಹುದು ಎಂದರು.
ರಿಯಲ್ ಎಸ್ಟೇಟ್‌ದಾರರು, ಬಿಲ್ಡರ್‌ಗಳು, ಸರ್ಕಾರದ ಪ್ರಾಧಿಕಾರಿಗಳು ಸೇರಿದಂತೆ ಯಾರೇ ಅದರೂ ಬಡಾವಣೆ, ವಿಲ್ಲಾ, ಅಪಾರ್ಟ್‌ಮೆಂಟ್ ಯೋಜನೆ ಮಾಡುವ ಮುನ್ನ ರೇರಾ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜತೆಗೆ ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಏಜೆಂಟರೂ ರೇರಾದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ ಪ್ರತಿ 5 ವರ್ಷಗಳಿಗೆ ಮರು ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ. ನೋಂದಣಿಯಾಗದೆ ಸೈಟ್, ಮನೆ, ಅಪಾರ್ಟ್‌ಮೆಂಟ್ ಮಾರಾಟದ ಪ್ರಚಾರ ಮಾಡುವಂತಿಲ್ಲ ಎಂದು ಹೇಳಿದರು.
ಯಾವ ಯೋಜನೆಗೆ ಗ್ರಾಹಕರಿಂದ ಹಣ ಸಂಗ್ರಹವಾಗಿದೆಯೋ ಆ ಹಣವನ್ನು ಅದೇ ಯೋಜನೆಗೆ ಬಳಸಬೇಕು. ಒಪ್ಪಂದದ ಶೇ.10ರಷ್ಟು ಹಣವನ್ನು ಮಾತ್ರ ಮನೆ, ಅಪಾರ್ಟ್‌ಮೆಂಟ್, ನಿವೇಶನ ಕೊಳ್ಳುವವರಿಂದ ಮುಂಗಡ ಪಡೆಯಬೇಕು. ಹಂತ, ಹಂತವಾಗಿ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಯಾವುದೇ ಆಸ್ತಿಯನ್ನು ನೋಂದಣಿ ಮಾಡಿದರೆ ತಮ್ಮ ಕೆಲಸ ಪೂರ್ಣ ಎಂದು ರಿಯಲ್ ಎಸ್ಟೇಟ್‌ದಾರರು ಭಾವಿಸಬೇಕಿಲ್ಲ. ಆಸ್ತಿ ವರ್ಗಾವಣೆಗೊಂಡು ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂಪೂರ್ಣ ಜವಾಬ್ದಾರಿ ರಿಯಲ್ ಎಸ್ಟೇಟ್‌ದಾರರದ್ದು ಎಂದು ವಿವರಿಸಿದರು.
ಜಾಗತೀಕರಣದ ಬಳಿಕ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಎಲ್ಲರೂ ಮನೆಯನ್ನು ಹೊಂದುವ ಕನಸಿಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾಯ್ದೆಯು (ರೇರಾ) ನೆರವಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಪಾರದರ್ಶಕತೆ ತಂದಿದ್ದು, ಈ ಬಗ್ಗೆ ಇನ್ನಷ್ಟು ವ್ಯಾಪಕ ಪ್ರಚಾರ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯ:
ರೇರಾದೊಂದಿಗೆ ನೋಂದಣಿ ಮಾಡಿಕೊಳ್ಳುವ ಬಿಲ್ಡರ್‌ಗಳು ನಿರ್ಮಿಸುವ ಯಾವುದೇ ಕಟ್ಟಡ, ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳು ರೇರಾ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಆಸ್ತಿ ಕೊಳ್ಳುವವರು ತಾವು ಖರೀದಿ ಮಾಡಲು ಹೊರಟಿರುವ ರಿಯಲ್ ಎಸ್ಟೇಟ್‌ದಾರರು ರೇರಾದಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಿ ಎಚ್ಚರಿಕೆಯಿಂದ ಮುನ್ನಡೆಯುವಂತೆ ಸಲಹೆ ನೀಡಿದರು.
ನಗರಪಾಲಿಕೆ ಹೆಚ್ಚುವರಿ ಉಪ ಆಯುಕ್ತ ಡಾ.ದಾಸೇಗೌಡ, ಕ್ರೆಡಾಯ್ ಮೈಸೂರು ಅಧ್ಯಕ್ಷ ಎನ್.ಎಸ್.ಮುರುಳೀಧರ, ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಸ್ಥ ಆರ್.ರಘುನಾಥ್, ನಗರ ಮತ್ತು ಗ್ರಾಮೀಣ ಯೋಜನಾ ಜಂಟಿ ನಿರ್ದೇಶಕ ಸುರೇಶ್, ಮುಡಾದ ನಗರ ಯೋಜನಾ ವಿಭಾಗದ ಶೇಷ, ಕಾರ್ಯಕ್ರಮ ಸಂಯೋಜಕರಾದ ಡಿ.ಶ್ರೀಹರಿ, ಎಲ್.ಅರುಣ್ ಪಂಡಿತ್ ಇತರರು ಇದ್ದರು.