ಶಾಸಕ ಜಗದೀಶ ಗುಡಗುಂಟಿ  
ಜಿಲ್ಲೆ

ಅನುಭವದಿಂದ ಉದ್ಯೋಗ ಅಭಿವೃದ್ದಿ

ಬಾಗಲಕೋಟೆ: ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ದೊರೆತ ಕೆಲಸದಲ್ಲಿ ಅನುಭವಿಯಾಗಿ, ಉದ್ಯೋಗ ಪಡೆದುಕೊಂಡು ಅಭಿವೃದ್ದಿ ಹೊಂದಬೇಕೆಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನವನಗರದ ಕಲಾಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉದ್ಯೋಗ ವಿನಿಮಯ ಕಚೇರಿ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಯಾವುದೇ ಸರಕಾರಗಳು ಯುವಜನತೆಗೆ ಮಾರ್ಗ ತೋರಿಸಿ ಪ್ರೋತ್ಸಾಹಿಸಿ ಅವರನ್ನು ಉದ್ಯೋಗ ಪತಿಗಳಾಗಬೇಕೆಂಬ ಉದ್ದೇಶ ಹೊಂದಿರಬೇಕು ಎಂದರು.

ಈಗ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಇದ್ದು, ಯುವಜನತೆ ಕೇವಲ ಸರಕಾರಿ ಕೆಲಸಕ್ಕೆ ಅವಲಂಬಿತರಾಗಿರದೇ ಅದಕ್ಕಿಂತ ಹೆಚ್ಚಿನ ಅವಕಾಶವಿರುವ ಉದ್ಯೋಗಗಳನ್ನು ಮಾಡಿ ತಾವು ಅಭಿವೃದ್ದಿ ಹೊಂದುವದರ ಜೊತೆಗೆ ದೇಶದ ಆರ್ಥಿಕತೆ ಸದೃಡಗೊಳಿಸಬೇಕು. ಜೀವನದಲ್ಲಿ ಯಾವುದೇ ಕಠಿಣ ಶ್ರಮ ಕೈಗೊಳ್ಳದಿದ್ದರೆ ಸಾಧನೆ ಆಗುವದಿಲ್ಲ. ಉದ್ಯೋಗ ಆರಂಭಕ್ಕಿಂತ ಮೊದಲೇ ಹಾನಿಯಾಗುವುದು ಲಾಭವಾಗುವುದು ಎಂಬ ಗೊಂದಲದಿಂದ ಹೊರಬರಬೇಕು. ಜೇಡರ ಹುಳು 20 ಬಾರಿ ಸೋತು 21ನೇ ಬಾರಿಗೆ ಗುರು ಮುಟ್ಟುವಂತೆ ಯುವಜನರು ಸಹ ನಿರಂತರ ಪ್ರಯತ್ನದಲ್ಲಿರಬೇಕು ಎಂದರು.

ಸಮಾಜದಲ್ಲಿ ಒಬ್ಬ ಯುವಕ ಮುಂದೆ ಬಂದರೆ ಅವನ ಹಿಂದೆ ಕನಿಷ್ಟ 30 ರಿಂದ 40 ಜನ ಹಿಂಬಾಲಕರಾಗುತ್ತಾರೆ. ಇಂದು ಕೇಂದ್ರ ಮತ್ತು ರಾಜ್ಯ ಸರಕಾರವು ಸ್ವಯಂ ಉದ್ಯೋಗಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. 2023-24ನೇ ಸಾಲಿನಲ್ಲಿ 350 ಸ್ವಸಹಾಯ ಸಂಘಗಳು ರಚನೆಗೊಂಡಿದ್ದು, ಅದರಲ್ಲಿ 160 ಜನರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಧಾನಮಂತ್ರಿ ಆತ್ಮ ನಿರ್ಭರದಡಿ ಮೊದಲ ಕಂತಿನಲ್ಲಿ 8926 ಜನರಿಗೆ 10 ಸಾವಿರ ರೂ.ಗಳಂತೆ ಸಾಲ ನೀಡಿದ್ದು, 2ನೇ ಕಂತಿನಲ್ಲಿ 2986 ಜನರಿಗೆ 20 ಸಾವಿರದಂತೆ ಸಾಲ ನೀಡಲಾಗಿದೆ. 3ನೇ ಕಂತಿನಲ್ಲಿ 456 ಜನರಿಗೆ 50 ಸಾವಿರದಂತೆ ಸಾಲ ಒದಗಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ ಯುವಕರು ತಮ್ಮ ವಿದ್ಯಾರ್ಹತೆ ಹಾಗೂ ಆಸಕ್ತಿಗೆ ಅನುಗುಣವಾಗಿ ಉದ್ಯೋಗ ದೊರೆಯಲಿ ಎಂದು ಆಶಿಸುತ್ತಾ, ಸರಕಾರ ನೀಡುವ ಕೌಶಲ್ಯ ತರಬೇತಿ ಒಂದು ದಿನದಲ್ಲ. ವರ್ಷದ 365 ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಸರಕಾರದ ಸಮನ್ವಯದಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆ ಕೆಲಸ ಮಾಡುತ್ತಿದೆ. ಈಗಾಗಲೇ ರಾಜ್ಯ ಸರಕಾರ ಯುವನಿಧಿ ಎಂಬ ಯೋಜನೆ ಜಾರಿಗೆ ತಂದಿದೆ. ಇದರ ಉದ್ದೇಶ ಕೇವಲ ನಿರುದ್ಯೋಗ ಭತ್ಯೆ ಕೊಡುವದಾಗಿಲ್ಲ. ಉದ್ಯೋಗ ಪಡೆಯಲು ಕೌಶಲ್ಯ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಪ್ರತಿಯೊಬ್ಬ ಯುವಕರು ಶಿಕ್ಷಣ ಪಡೆಯುವ ಉದ್ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕೆಂಬ ಗುರಿ ಇರುತ್ತದೆ. ನಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳುವ ಸಮಯ ಎಂದು ತಿಳಿದುಕೊಳ್ಳಬೇಕು. ತಮ್ಮ ವಿದ್ಯಾಬ್ಯಾಸಕ್ಕೆ ಹೊಂದುವಂತಹ ಉದ್ಯೋಗವನ್ನು ಪಡೆಯಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿ ಗುರುಪಾದಯ್ಯ ಹಿರೇಮಠ, ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ರಮೇಶ ಜಾದವ, ಭಾರತ ಸ್ಕೌಡ್ಸ ಮತ್ತು ಗೈಡ್ಸ್‍ನ ಪ್ರಮೋದ ಚೌಗಲಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಹಾಗೂ ಚಿದಾನಂದ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.