ಜಿಲ್ಲೆ

ಅನುಭವಕ್ಕೆ ಬಾರದ ವಿಷಯ ಬರೆಯದಿರಿ: ಲೇಖಕರಿಗೆ ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಲಹೆ

ಮೈಸೂರು: ಲೇಖಕ ತನಗೆ ಗೊತ್ತಿರದ ವಿಚಾರಗಳನ್ನು ಕೃತಿಗಿಳಿಸಲು ಹೋದರೆ ಕೃತಿಯ ಅಂದಗೆಡಿಸುತ್ತದೆ ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಎಂ.ಎಸ್.ವಿಜಯಾ ಹರನ್ ಬರೆದಿರುವ ‘ವಿಶ್ವ ಸಾಹಿತಿ ಭೈರಪ್ಪ: ಅನುವಾದಕರ ಅನುಭವಗಳು’ ಹಾಗೂ ‘ಆನಂದರ ಬದುಕು ಬರಹ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬರಹಗಾರ ತನ್ನ ಅನುಭವಕ್ಕೆ ಬಾರದ ವಿಷಯಗಳನ್ನು ಬರೆಯಬಾರದು. ವಿದ್ವಾಂಸರು, ಸಾಹಿತಿಗಳ ಜತೆಗಿನ ಒಡನಾಟ, ಅವರ ನಡುವಿನ ಚರ್ಚೆ, ಬರಹಗಾರನ ಬರಹ ಪಕ್ವತೆಯನ್ನು ಪಡೆಯಲು ಪೂರಕವಾಗಿರಲಿದೆ. ಯಾವುದೇ ಸಾಹಿತಿಯ ಬರಹಗಳನ್ನು ಅನುವಾದ ಅಥವಾ ವಿಮರ್ಶೆ ಮಾಡುವಾಗ ಅವರ ಹಿನ್ನೆಲೆಯಲ್ಲಿ ತಿಳಿದುಕೊಂಡಿದ್ದರೆ ಮಾತ್ರ ಬರಹದಲ್ಲಿ ತಾಜಾತನ ಕಾಣಬಹುದು. ಆಗ ಓದುಗನಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದು ಹೇಳಿದರು.
ಕೃತಿಯನ್ನು ಸಹೃದಯತೆಯಿಂದ ವಿಮರ್ಶಾತ್ಮಕವಾಗಿ ಬರೆದಾಗ ಮಾತ್ರ ಅವು ಓದುಗನ ಮನಮುಟ್ಟುವಲ್ಲಿ ಯಶಸ್ವಿಯಾಗುತ್ತದೆ. ಸಾಹಿತ್ಯ ಬರವಣಿಗೆಗೂ ಮುನ್ನ ಸಾಕಷ್ಟು ಅಧ್ಯಯನ ಮಾಡಿ ಬರೆಯಬೇಕು. ಅದರಿಂದ ಸಾಹಿತ್ಯದಲ್ಲಿಯೂ ಪಕ್ವತೆ ಬರುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ.ಸಿ.ನಾಗಣ್ಣ ಮಾತನಾಡಿ, ಭೈರಪ್ಪ ಅವರು ತಮ್ಮ ಬದುಕಿನಲ್ಲಿ ಕಠಿಣ ಹಾದಿಯನ್ನು ತುಳಿದಿದ್ದಾರೆ. ಅವರು ಬರೆದಿರುವ ಸುಮಾರು 19 ಕಾದಂಬರಿಗಳು ವಿವಿಧ ಭಾಷೆಗಳಿಗೆ ಅನುವಾದ ಆಗಿವೆ. ಆ ಅನುವಾದಕರನ್ನೆಲ್ಲಾ ಸಂಪರ್ಕಿಸಿ ಅವರ ಅನುಭವವನ್ನು ಪುಸ್ತಕ ರೂಪಕ್ಕಿಳಿಸಿರುವ ಲೇಖಕಿಯ ಸಾಹಸ ಅಭಿನಂದನಾರ್ಹ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್, ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮೈಸೂರು, ಕಾರ್ಯದರ್ಶಿ ಚೀಲೂರು ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇತರರು ಇದ್ದರು.