ಚಿತ್ರದುರ್ಗ: ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಅನುಭವ ಮಂಟಪದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಕ್ಕಳದ್ದೇ ದರ್ಬಾರ್.‘ಮಕ್ಕಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ನಾಡಿನ ನಾನಾ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಕೇಳಿಬಂದ ಪ್ರೇಕ್ಷಕರ ಜೋರಾದ ಚಪ್ಪಾಳೆಗಳ ಸದ್ದು ಸಮಾರಂಭದ ಮೆರಗನ್ನು ಹೆಚ್ಚಿಸಿದಂತಿತ್ತು.
ಬೆಂಗಳೂರಿನ ಜ್ಞಾನ, ಉಡುಪಿಯ ದಿಯಾಹೆಗಡೆ, ಬೀದರ್‌ನ ಶಿವಾನಿಸ್ವಾಮಿ, ಹುಬ್ಬಳ್ಳಿಯ ಮಾನ್ಯಗುರುಪಾಟೀಲ ಅವರ ಗಾಯನ, ನಿಟ್ಟೆಯ ಮನಸ್ವಿಕುಲಾಲ್,ವಿಜಯಪುರದ ಅದ್ವಿತಾಬಡಿಗೇರ್,ಹೊಸದುರ್ಗದ ಸಾತ್ವಿಕ್‌ರಾಜೇಶ್ ಅವರ ಭಾಷಣ,ಹುಬ್ಬಳ್ಳಿಯ ಧೀಮ ಹಿ,ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ಕಲಾವಿದೆಯರ ವಚನ ನೃತ್ಯ ಹಾಗೂ ಬೆಂಗಳೂರಿನ ರುದ್ರಮಾಸ್ಟರ್ ತಂಡದವರು ಸಾಮೂಹಿಕ ನೃತ್ಯವನ್ನು ಪ್ರಸ್ತುತ ಪಡಿಸಿದರು. ಗಾಯನದೊಂದಿಗೆ ಮಾನ್ಯ ನಿರೂಪಿಸಿದಳು.
ಮೌಲ್ಯಯುತ ಶಿಕ್ಷಣದ ಕುರಿತು ಮಾತನಾಡಿದ ಮನಸ್ವಿಕುಲಾಲ್,ಮೆಕಾಲೆ ಶಿಕ್ಷಣದಿಂದಾಗಿ ಎಲ್ಲೋ ಇವೆ ಎಂದು ಕೇಳುತ್ತಿದ್ದ ವೃದ್ಧಾ ಶ್ರಮಗಳು ಈಗ ನಮ್ಮಲ್ಲೂ ಹೆಚ್ಚಾಗುತ್ತಿವೆ. ಒಂದು ದೇಶವನ್ನು ನಾಶ ಮಾಡಬೇಕು ಎಂದಾದರೆ ಅಲ್ಲಿ ಸಂಸ್ಕೃತಿಯನ್ನು ಮೊದಲು ನಾಶ ಮಾಡಬೇಕೆಂಬ ಮಾತಿದೆ.
ನಮ್ಮ ನಾಡಿನ ಹಲವು ಮಹನೀಯರ ಆದರ್ಶಗಳು,ಅವರು ಪ್ರತಿಪಾದಿಸಿದ ಮೌಲ್ಯಗಳ ಶಿಕ್ಷಣ,ನಮಗಿಂದು ಬೇಕಿದೆ. ಸಜ್ಜನಿಕೆ, ಸಂ ಸ್ಕಾರ, ಸಂಸ್ಕೃತಿಯನ್ನು ಹೇಳಿಕೊಡಬೇಕಿದೆ. ಗುರು-ಹಿರಿಯರು,ದೇವರೇ ಆಗಿರುವ ಪಾಲಕರನ್ನು ಗೌರವಿಸುವುದನ್ನು ಕಲಿಸ ಬೇಕಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಮಾತೃಭಾಷೆಯಲ್ಲಿ ಕಲಿಕೆಯ ವೇಗ ಹೆಚ್ಚುತ್ತದೆ,ಸುಲಭದಲ್ಲಿ ಅರ್ಥವಾಗುತ್ತದೆ. ಇಂದು ಶಿಕ್ಷಣ ಜ್ಞಾನಾರ್ಜನೆ ಆಗುವ ಬದಲು ಕೇವಲ ಸರ್ಟಿಫೀಕೆಟ್‌ಗೆ ಎಂಬಂತಾಗಿದೆ ಎಂದು ಮನಸ್ವಿ ಹೇಳಿದಳು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,ನೂರಾರು ವರ್ಷಗಳಿಂದ ಮುರುಘಾಮಠ,ಅನ್ನ,ಜ್ಞಾನ ದಾಸೋಹಕ್ಕೆ ಒತ್ತು ಕೊಡುತ್ತಾ ಬಂದಿದೆ. ಶರಣಸಂಸ್ಕೃತಿ ಉತ್ಸವ ಅನೇಕ ಪ್ರತಿಭೆಗಳ ಅನಾವ ರಣಕ್ಕೆ ವೇದಿಕೆ ಒದಗಿಸುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆ ನಿಜಕ್ಕೂ ಬೆ ರಗು ಮೂಡಿಸುವಂತಿದ್ದಾಗಿದೆ. ಅವರಿಗೆ ತರಬೇತಿ ಕೊಡಿಸಲು ಶ್ರಮಿಸಿ,ತಾವು ಎಲೆಮರೆ ಕಾಯಂತೆ ಇರುವ ಪಾಲಕರು ನಿಜಕ್ಕೂ ಅಭಿ ನಂದಾರ್ಹರು. ಮಕ್ಕಳಲ್ಲಿರುವ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಿದೆ ಎಂದರು.
ಮುರುಘಾಮಠದ ಆಡಳಿತಾಧಿಕಾರಿ,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ,ಉಸ್ತುವಾರಿ ಶ್ರೀ ಬಸವಪ್ರಭು ಸ್ವಾ ಮೀಜಿ,ಶ್ರೀಮಡಿವಾಳ ಗುರುಪೀಠದ ಶ್ರೀ ಜಗದ್ಗುರು ಬಸವ ಮಾಚಿದೇವ ಸ್ವಾಮೀಜಿ,ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀಶಿವಬಸವ ಸ್ವಾ ಮೀಜಿ,ಕಾರ‌್ಯಾಧ್ಯಕ್ಷ ಕೆ.ಸಿ.ನಾಗರಾಜ್,ಎಸ್‌ಜೆಎಂ ವಿದ್ಯಾಪೀಠದ ಸಿಇಒ ಎಂ.ಭರತ್‌ಕುಮಾರ್,ಮಾನವ ಸಂಪನ್ಮೂಲ ಅಧಿಕಾರಿ ವಿಜಯಾ ಕೆ.ಮಠ,ತಹಸೀಲ್ದಾರ್‌ಡಾ.ನಾಗವೇಣಿ,ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಇದ್ದರು. ಕೆ.ಎನ್.ವಿಶ್ವನಾಥ್ ಸ್ವಾಗತಿಸಿದರು.