ಬೆಳಗಾವಿ: ಜಾತಿ, ಧರ್ಮ, ಭೇದಭಾವ ತೊಲಗಿಸಲು ಶರಣರು ಒಂದು ವೇದಿಕೆ ಮಾಡಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿ, ಜನರನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದರು. ಅದುವೇ ಅನುಭವ ಮಂಟಪ.
ಈ ಅನುಭವ ಮಂಟಪವೇ ಸಮಾಜದ ಏಳಿಗೆಯ ಮೊದಲ ಪಾರ್ಲಿಮೆಂಟ್ ಆಗಿದೆ ಎಂದು ಸಾಹಿತಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬಸವಣ್ಣನವರ ಇತಿಹಾಸ ಓದಬೇಕಾದರೆ ಅದರಲ್ಲಿ ಮುಖ್ಯವಾಗಿ ಬರುವುದು ಅವರ ಆಪ್ತರಾದ ಹಡಪದ ಅಪ್ಪಣ್ಣನವರು. ಬಸವಣ್ಣನವರ ಪ್ರೀತಿ ವಾತ್ಸಲ್ಯದೊಂದಿಗೆ ಅನುಭವ ಮಂಟಪದ ಕಾರ್ಯಕಲಾಪಗಳ ನಿರ್ವಹಣೆಯನ್ನು ಅಪ್ಪಣ್ಣನವರು ಸಮಯ ಪ್ರಜ್ಞೆ ಮತ್ತು ಜ್ಞಾನದಿಂದ ಮಾಡುತ್ತಿದ್ದರು ಎಂದು ಹೇಳಿದರು.
ಶರಣರ ಸಮುದಾಯ ಜಾತಿ, ಧರ್ಮಕ್ಕೆ ಬೆಲೆ ಕೊಡದೆ ಜ್ಞಾನಕ್ಕೆ ಬೆಲೆ ನೀಡುತ್ತಿತ್ತು. ಹಡಪದ ಅಪ್ಪಣ್ಣನವರ ಜ್ಞಾನಕ್ಕೆ, ಆಲೋಚನೆಗಳಿಗೆ ಬೆಲೆ ನೀಡಿ ಅವರಿಗೆ ವ್ಯಕ್ತಿ ಗೌರವ ನೀಡಿದ್ದು ಬಸವಣ್ಣವರು. ಬಸವಣ್ಣನವರು ಜಾತಿ ವ್ಯವಸ್ಥೆ ತೊಲಗಿಸುವ ಹೋರಾಟದಲ್ಲಿ ಅಪ್ಪಣ್ಣ ಅವರನ್ನು ತಮ್ಮ ಆಪ್ತಸಹಾಯಕರಾಗಿ ನೇಮಿಸಿಕೊಂಡಿದ್ದರು ಎಂದು ತಿಳಿಸಿದರು.
ಇದಕ್ಕೂ ಮುಂಚೆ ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರಗೆ ಕುಂಭ ಮೇಳದೊಂದಿಗೆ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಬೆಳಗಾವಿ ಉತ್ತರದ ಶಾಸಕ ಅನೀಲ ಬೆನಕೆ ಮೆರವಣಿಗೆಗೆ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಖಿಲ ಕರ್ನಾಟಕ ಹಡಪದ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಸುರೇಶ ಹಡಪದ, ಅಧ್ಯಕ್ಷ ಸಂತೋಷ ಹಡಪದ ಇತರರಿದ್ದರು.