ಜಿಲ್ಲೆ

ಅನುಭವ ಇಲ್ಲದ ಆರಗ ಜ್ಞಾನೇಂದ್ರ : ಮಾಜಿ ಶಾಸಕ ಕೆ.ಷಡಕ್ಷರಿ ಟೀಕೆ, ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ, ಸಚಿವ ನಾಗೇಶ್​ ರಾಜೀನಾಮೆಗೆ ಪಟ್ಟು

ತಿಪಟೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕು ನಾಗರಿಕರ ಬಳಗದ ಕಾರ್ಯಕರ್ತರು ಬುಧವಾರ ನಗರದ ಪ್ರವಾಸಿ ಮಂದಿರದ ಎದುರು ಮಾಜಿ ಶಾಸಕ ಕೆ.ಷಡಕ್ಷರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗೃಹ ಖಾತೆ ನಿಭಾಯಿಸುವ ಅರ್ಹತೆ&ಅನುಭವ ಆರಗ ಜ್ಞಾನೇಂದ್ರ ಅವರಿಗೆ ಇಲ್ಲ. ಇನ್ನು ಅನುಭವ ಇಲ್ಲದವರಿಗೆ ಅಧಿಕಾರ ಕೊಟ್ಟಿದ್ದೇ ಪಠ್ಯ ಪುಸ್ತಕದ ವಿವಾದಗಳಿಗೆ ಕಾರಣವಾಗಿದೆ. ಕೂಡಲೇ ಶಿಕ್ಷಣ ಸಚಿವರು ಮತ್ತು ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಕೆ.ಷಡಕ್ಷರಿ ಆಗ್ರಹಿಸಿದರು. ಪಠ್ಯ ಪುಸ್ತಕ ಪರಿಷ್ಕರಣೆ ಆಗಬಾರದೆಂದೇನೂ ಇಲ್ಲ. ಆದರೆ ಪರಿಷ್ಕರಣೆ ಮಕ್ಕಳ ಮನ ಮುಟ್ಟುವಂತಿರಬೇಕು. ಅರ್ಹತೆ&ಅನುಭವ ಇಲ್ಲದವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿಸಿದ ಪರಿಣಾಮ ಇಂತಹ ಅನುಕೂಲಗಳಿಗೆ ಕಾರಣವಾಗಿದೆ ಎಂದರು. ಹಿಂದಿನಿಂದಲೂ ಬಿಜೆಪಿ ಹೇಳುವುದು ಒಂದು, ಮಾಡುವುದು ಇನ್ನೊಂದು. 144 ಸೆಕ್ಷನ್​ ಜಾರಿಯಲ್ಲಿದ್ದಾಗ ಸಚಿವ ಕೆ.ಎಸ್​.ಈಶ್ವರಪ್ಪ ಮಾಡಿದ್ದೇನು?, ಕೇಂದ್ರ ಸಚಿವ ಕೂಬಾ ಮಾಡಿದ್ದೇನು?. ಅವರ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಾಗಿದೆ ?. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಇದರಲ್ಲಿ ಲೋಪವಾಗಿದ್ದರೆ ಪೊಲೀಸರು ಕಾನೂನು ಕ್ರಮ ವಹಿಸುತ್ತಾರೆ. ಆದರೆ ನಮ್ಮದು ಸುಸಂಸತ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗರು ಸಾಂಕೇತಿಕ ಪ್ರತಿಭಟನೆ ಮುಕ್ತಾಯಗೊಳಿಸಿ ತೆರಳುತ್ತಿದ್ದ ಎನ್​ಎಸ್​ಯುಐ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದು, ಈಗ ಸುಳ್ಳಿನ ಸರಮಾಲೆಯನ್ನೇ ಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್​ ಮುಖಂಡ ಲೋಕೇಶ್ವರ್​ ಮಾತನಾಡಿ, ಪಠ್ಯದಲ್ಲಿ ಆದಿಗುರು, ಚಾಣಕ್ಯ, ಸರ್​.ಎಂ.ವಿಶ್ವೇಶ್ವರಯ್ಯ, ಶಂಕರಾಚಾರ್ಯರು, ಮುಂತಾದವರ ವಿಷಯಗಳನ್ನು ತಿದ್ದಿಲ್ಲ. ಆದರೆ ವಿಶ್ವಕ್ಕೆ ಸಮಾನತೆ ಸಾರಿದ ಬಸವಣ್ಣ, ನಾಡ ಕವಿ ಕುವೆಂಪು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್​ ಅವರ ವಿಷಯಗಳನ್ನು ತಿದ್ದಲಾಗಿದೆ ಎಂದರು. ಉಪವಿಭಾಗಾಧಿಕಾರಿ ಪರವಾಗಿ ಗ್ರೇಡ್​&2 ತಹಸೀಲ್ದಾರ್​ ಕೆ.ಎಲ್​.ಪರಮೇಶ್ವರಯ್ಯ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಸಚಿವರ ನಿವಾಸದ ಪಕ್ಕದಲ್ಲಿ ಸಚಿವರ ಕಚೇರಿ ಇದ್ದಿದ್ದರಿಂದ ಸಾಂಕೇತಿಕ ಪ್ರತಿಭಟನೆ ನಡೆಸಲು ಅಲ್ಲಿಗೆ ಎನ್​ಎಸ್​ಯುಐ ಕಾರ್ಯಕರ್ತರು ಹೋಗಿದ್ದರೇ, ಸಚಿವರ ಮನೆಗೆ ಬೆಂಕಿ ಹಚ್ಚಲು ಅಲ್ಲ. ಗೃಹ ಕಚೇರಿ ಬೇರೆ ಕಡೆ ಇದ್ದಿದ್ದರೆ ಅಲ್ಲಿಗೇ ಹೋಗುತ್ತಿದ್ದರು. ಕೆ.ಷಡಕ್ಷರಿ, ಮಾಜಿ ಶಾಸಕ ಪಠ್ಯ ಕ್ರಮದಲ್ಲಿ ಆಗಿರುವ ಬದಲಾವಣೆ ಮುಂದಿನ ಪೀಳಿಗೆಗೆ ಮಾರಕವಾಗಲಿದೆ.  ಬಿಜೆಪಿಗರೇ ನಾಗೇಶ್​ ಅವರ ತೀರ್ಮಾನ ವಿರೋಧಿಸುತ್ತಿದ್ದಾರೆ. ಎನ್​ಎಸ್​ಯುಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮುಂಚೆಯೇ ಗೊತ್ತಾಗಿದ್ದರೆ ನಮ್ಮವರ ಮೈ ಮುಟ್ಟಲೂ ಬಿಡುತ್ತಿರಲಿಲ್ಲ. ಲೋಕೇಶ್ವರ್​, ಕಾಂಗ್ರೆಸ್​ ಮುಖಂಡ