ಜಿಲ್ಲೆ

ಅನುದಾನಿತ ಶಾಲಾ ಶಿಕ್ಷಕಿಯರಿಗೂ ಶಿಶುಪಾಲನಾ ರಜೆ ನೀಡಿ: ಮರಿತಿಬ್ಬೇಗೌಡ ಆಗ್ರಹ

ಮೈಸೂರು: ಸರ್ಕಾರಿ ಮಹಿಳಾ ನೌಕರರ ಮಾದರಿಯಲ್ಲಿ ಅನುದಾನಿತ ಶಾಲಾ ಕಾಲೇಜುಗಳ ಮಹಿಳಾ ನೌಕರರಿಗೂ ಶಿಶುಪಾಲನಾ ರಜೆ ವಿಸ್ತರಣೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.

ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆ ಇಲ್ಲದಂತೆ ಸೇವಾವಧಿಯಲ್ಲಿ ಎರಡು ವರ್ಷಗಳ ಅವಧಿಗೆ (730 ದಿನ) ಶಿಶುಪಾಲನಾ ರಜೆ ಮಂಜೂರು ಮಾಡಲಾಗಿದೆ.

ಜತೆಗೆ, ಪ್ರಸೂತಿ ರಜೆಯೊಂದಿಗೆ ಸೇವಾವಧಿಯಲ್ಲಿ ಆರು ತಿಂಗಳ (180 ದಿನ) ಶಿಶುಪಾಲನಾ ರಜೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಸರ್ಕಾರಿ ನೌಕರರಂತೆ ಸರ್ಕಾರದ ಎಲ್ಲ ಸವಲತ್ತು, ಸೌಲಭ್ಯಗಳಿಗೂ ಅರ್ಹರಾದ ಅನುದಾನಿತ ಶಾಲಾ ಕಾಲೇಜುಗಳ ಮಹಿಳಾ ನೌಕರರನ್ನು ಈ ಆದೇಶದಲ್ಲಿ ಕೈಬಿಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪರಿಶೀಲಿಸಿ, ಈ ಮಹಿಳಾ ನೌಕರರಿಗೂ ಶಿಶುಪಾಲನಾ ರಜೆಯನ್ನು ಯಥಾವತ್ತಾಗಿ ವಿಸ್ತರಣೆ ಮಾಡಬೇಕು ಎಂದು ಪ್ರಕಟಣೆಯಲ್ಲಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.