ಜಿಲ್ಲೆ

ಅನುದಾನಕ್ಕಾಗಿ ಗೋಗರೆಯುವ ಸ್ಥಿತಿ ನಿರ್ಮಾಣ

 ಕಿಕ್ಕೇರಿ: ಜನತೆಯ ಕಣ್ಣೀರು ಒರೆಸುವ ಕೆಲಸ ಮಾಡಲು ಶಾಸಕರು ಅನುದಾನಕ್ಕೆ ಗೋಗರೆಯುವ ಸ್ಥಿತಿ ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ಸೋಮವಾರ ಲೋಕಾರ್ಪಣೆಗೊಂಡ ರಂಗದ ಕುರ್ಜು(ರಂಗಮಂಟಪ) ಸಮಾರಂಭದಲ್ಲಿ ಮಾತನಾಡಿ, ನಮ್ಮ ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂಬ ತವಕವಿದೆ. ಆದರೆ ಸರ್ಕಾರ ಅನುದಾನ ನೀಡದೆ ವಿವಿಧ ಭಾಗ್ಯಗಳಲ್ಲಿ ಮಗ್ನವಾಗಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮರೆತಿದ್ದಾರೆ. ಸಚಿವರ ಮನವಿಯಂತೆ ಜನತೆ ಪೆನ್ ಪೇಪರ್ ಕೊಟ್ಟಿದ್ದಾರೆ. ಆದರೆ ಇವರು ಮಾಡಿರುವ ಸಾಧನೆ ಏನಿದೆ ಎಂದು ಪ್ರಶ್ನಿಸಿದರು.

ಕುಮಾರಣ್ಣ ಕೇಂದ್ರ ಸಚಿವರಾಗಿ ಬಹಳ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಸಹಿಸದೆ ಟೀಕೆ ಮಾಡಲು ಮುಂದಾಗಿದ್ದಾರೆ. 2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆ ಗಿಮಿಕ್ ಆಗಿದೆ. ಚನ್ನಪಟ್ಟಣ, ಸಂಡೂರುಗೆ ಹಣ ವಿತರಣೆ ಆಗಿದೆ. ನಮ್ಮ ತೆರಿಗೆ ಸಂಪತ್ತು ಸ್ವೇಚ್ಛಾಚಾರವಾಗಿ ಅಕ್ಕಪಕ್ಕದ ಚುನಾವಣೆಗೆ ಖರ್ಚಾಗುತ್ತಿದೆ. ಎಸ್‌ಸಿ, ಎಸ್‌ಟಿ ಹಣ ದುರುಪಯೋಗ ಆಗಿದೆ. ಸರ್ಕಾರದ ದುರಾಡಳಿತ, ಭ್ರಷ್ಟಾಚಾರಕ್ಕೆ ಜನತೆ ರೋಸಿ ಹೋಗಿದ್ದು, ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್ ಭದ್ರಕೋಟೆ ಕೆ.ಆರ್. ಪೇಟೆ ಎಂದು ಅನುದಾನ ನೀಡಲು ಮೀನಮೇಷ ಮಾಡಲಾಗುತ್ತಿದೆ ಎಂದು ಗುಡುಗಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಟುಂಬ ಎಂದು ಮಂಡ್ಯ ಜನತೆ ಮರೆಯಲಾರದು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಒಳ್ಳೆಯ ಕಾಲ ಬರಲಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರಲು ತಮ್ಮ ಬೆಂಬಲವಿದೆ ಎಂದು ಜನಪ್ರತಿನಿಧಿಗಳಿಗೆ ಹೇಳಿದರು.

ಶಾಸಕ ಎಚ್.ಟಿ. ಮಂಜು ಮಾತನಾಡಿ, ಅನುದಾನ ನೀಡಲು ಕಾಂಗ್ರೆಸ್ ಸರ್ಕಾರ ಮೀನಮೇಷ ಎಣಿಸುತ್ತಿದೆ. ಅನುದಾನಕ್ಕಾಗಿ ವಿಧಾನಸೌಧಕ್ಕೆ ಪಾದಯಾತ್ರೆ ಕೈಗೊಳ್ಳಲಾಗುವುದು. ಪಾದಯಾತ್ರೆಯಲ್ಲಿ ತಾಲೂಕಿನ ಚಿಂತಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸಲಿದ್ದು ಅನುದಾನ ತರುವವರಿಗೆ ತಮ್ಮ ಹೋರಾಟ ನಿಲ್ಲದು. ಕಾಡಿಬೇಡಿದಾಗ ಕೊಡುವ ಒಂದೆರಡು ಕೋಟಿ ರೂ. ಗಳಿಂದ ಕ್ಷೇತ್ರದ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ. ಜನತೆ ತಮ್ಮ ಮೇಲೆ ಬಹಳ ಭರವಸೆ ಇಟ್ಟಿದ್ದು, ಮುಖ ತೋರಿಸುವುದು ಹೇಗೆ ಎಂಬ ಕೊರಗು ಕಾಡುತ್ತಿದೆ ಎಂದು ನುಡಿದರು.

ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗ್ರಾಮದ ಐಕ್ಯತೆ, ಹಬ್ಬಹರಿದಿನಗಳ ಬೆಸೆಯುವ ರಂಗಮಂಟಪ ಜಾನಪದ ಸೊಗಡನ್ನು ಬಿಂಬಿಸುವ ಸ್ಥಳವಾಗಿದೆ. ಕ್ಷೇತ್ರದ ಜನತೆಗೆ ಜೆಡಿಎಸ್‌ಗೆ ಜೀವ ನೀಡಿದ್ದು ತಮ್ಮ ಇಡೀ ಕುಟುಂಬಕ್ಕೆ ಕ್ಷೇತ್ರದ ಋಣವಿದೆ ಎಂದು ನೆನೆದರು.

ಹುಣಸೂರು ಕ್ಷೇತ್ರದ ಶಾಸಕ ಹರೀಶ್‌ಗೌಡ ಮಾತನಾಡಿ, ಸಂಕಷ್ಟ ಪರಿಸ್ಥಿತಿಯಲ್ಲಿ ಶಾಸಕನಾಗಿರುವೆ. ವರ್ಷಕ್ಕೆ 2 ಕೋಟಿ ರೂ. ಅನುದಾನ ಸಿಗುತ್ತಿದೆ. ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ಗ್ರಾಮಗಳಿವೆ. ಒಂದು ಗ್ರಾಮಕ್ಕೆ 15 ಸಾವಿರ ರೂ. ಕೂಡ ಸಿಗಲಾರದು. ಇಂತಹ ಸರ್ಕಾರಕ್ಕೆ ಜನತೆಯೇ ತಕ್ಕ ಪಾಠ ಕಲಿಸಬೇಕಿದೆ ಎಂದು ಬೇಸರಿಸಿದರು.

ಹಾಸನ ಶಾಸಕ ಸ್ವರೂಪ್, ಶ್ರವಣಬೆಳಗೊಳ ಕ್ಷೇತ್ರ ಶಾಸಕ ಸಿ.ಎನ್. ಬಾಲಕೃಷ್ಣ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಂ, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್ ಇದ್ದರು.