ಜಿಲ್ಲೆ

ಅನುದಾನ ಸಮರ್ಪಕವಾಗಿ ಬಳಸಿ

ಬೆಳಗಾವಿ: ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಂಡು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿತ ಭೌತಿಕ ಹಾಗೂ ಆರ್ಥಿಕ ಗುರಿ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚಿಸಿದರು.

ಗುರುವಾರ ವರ್ಚುವಲ್ ಸಭೆ ಮೂಲಕ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮಾರ್ಚ್ ಸಮೀಪಿಸುತ್ತಿರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಿರುವ
ಅನುದಾನ ಬಳಸಿಕೊಂಡು ನಿಗದಿತ ಗುರಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಿ ಅನುದಾನ ವಾಪಸ್ ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಈ ಬಗ್ಗೆ ನಿಗಾ ವಹಿಸುವುದರ ಜತೆಗೆ ಪ್ರತಿಯೊಂದು ಇಲಾಖೆ ಪ್ರಗತಿಯನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಲಸಿಕಾಕರಣ ಚುರುಕುಗೊಳಿಸಿ: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಮೊದಲ ಡೋಸ್ ಲಸಿಕಾಕರಣದಲ್ಲಿ ಶೇ. 100 ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ ಎರಡನೇ ಡೋಸ್ ಲಸಿಕೆ, ಬೂಸ್ಟರ್ ಡೋಸ್ ಹಾಗೂ 15ರಿಂದ 17 ವರ್ಷದೊಳಗಿನ ಮಕ್ಕಳ ಲಸಿಕಾಕರಣವನ್ನು ಇನ್ನಷ್ಟು ಚುರುಕುಗೊಳಿಸಿ ಶೇ. 100 ಪ್ರಗತಿ ಸಾಧಿಸಬೇಕು. ರಾಮದುರ್ಗ, ಖಾನಾಪುರ, ರಾಯಬಾಗ ಸೇರಿ ಕೆಲ ತಾಲೂಕುಗಳಲ್ಲಿ ಲಸಿಕಾಕರಣ ಪ್ರಗತಿ ಕುಂಠಿತಗೊಂಡಿದ್ದು, ಈ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಅತೀಕ್ ಸೂಚಿಸಿದರು.

ಗುರಿ ಭರವಸೆ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಕರೊನಾ ವ್ಯಾಕ್ಸಿನ್ ಮೊದಲ ಡೋಸ್ ಶೇ. 100 ಪ್ರಗತಿ ಸಾಧಿಸಲಾಗಿದ್ದು, ಎರಡನೇ ಡೋಸ್ ಲಸಿಕಾಕರಣದಲ್ಲಿ ಇದುವರೆಗೆ ಶೇ. 92 ಪ್ರಗತಿ ಸಾಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಲಸಿಕಾಕರಣದ ನಿಗದಿತ ಗುರಿ ಸಾಧಿಸಲಾಗುವುದು. ಹಾಸ್ಟೆಲ್ಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಮೂಲ ಸೌಕರ್ಯ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಲೋಕೋಪಯೋಗಿ ಇಲಾಖೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ ಅವರು ವಿವಿಧ ಇಲಾಖೆಗಳ ಪ್ರಗತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ ವರವಟ್ಟಿ ಇತರರಿದ್ದರು.

ಲಭ್ಯ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಿ

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನರೇಗಾದಡಿ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಆದರೆ, ಇದು ಸಾಕಾಗುತ್ತಿಲ್ಲ. ಹೀಗಾಗಿ ಸ್ಥಳೀಯ ಶಾಸಕರ ನೆರವು ಪಡೆದು ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬೇಕು. ಅದಲ್ಲದೆ, ಜಿಪಂ ಹಾಗೂ ತಾಪಂಗಳ ಇತರ ಅನುದಾನ ಬಳಸಿಕೊಳ್ಳುವ ಬಗ್ಗೆ ಪರಿಶೀಲಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳು ಮತ್ತು ಆಶ್ರಮ ಶಾಲೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ನಿಯಮಿತವಾಗಿ ಭೇಟಿ ನೀಡಿ ಅಲ್ಲಿನ ಊಟದ ರೀತಿ ಹಾಗೂ ಇತರ ಮೂಲ ಸೌಕರ್ಯ ಪರಿಶೀಲಿಸಬೇಕು. ಅಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು. ಸಾಮಾಜಿಕ ಅರಣ್ಯ ಬೆಳೆಸಲು ಕಳೆದ 3-4 ವರ್ಷಗಳಲ್ಲಿ ಕೈಗೊಂಡ ಕೆಲಸಗಳನ್ನು ಡ್ರೋನ್ ಸಮೀಕ್ಷೆ ಮೂಲಕ ಪರಿಶೀಲಿಸಬೇಕು. ಈ ಕುರಿತು ವರದಿ ನನಗೆ ವರದಿ ಸಲ್ಲಿಸಬೇಕು ಎಂದು ಅತೀಕ್ ಹೇಳಿದರು.

ಹಿಂಗಾರು ಹಂಗಾಮಿನ ಬೆಳೆಹಾನಿ ಸಮೀಕ್ಷೆ ಶೇ. 94.86 ಪೂರ್ಣಗೊಂಡಿದೆ. ಅಲ್ಲದೆ, ಬೆಳೆಹಾನಿಗೆ ಸಂಬಂಧಿಸಿದಂತೆ 94.80 ಕೋಟಿ ರೂ. ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮು ಮಾಡಲಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಸೇರಿ ಯಾವುದೇ ಕೊರತೆ ಇಲ್ಲ.| ಶಿವನಗೌಡ ಪಾಟೀಲ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ