ಖಾನಾಪುರ: ಕಿತ್ತೂರು ಮತ್ತು ಖಾನಾಪುರ ತಾಲೂಕಿಗೆ ಜಲ ಜೀವನ ಮಿಷನ್ ಅಡಿ ಅನುಷ್ಠಾನಗೊಳಿಸಿರುವ ದೇಗಾಂವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 565 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಖಾನಾಪುರ ತಾಲೂಕಿನ 106 ಗ್ರಾಮಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದು, ಅನುದಾನ ಮಂಜೂರು ಮಾಡಲು ಪ್ರಯತ್ನಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಹುಟ್ಟುವ ಮಲಪ್ರಭಾ ನದಿಯ ನೀರನ್ನು ಹೊರ ತಾಲೂಕುಗಳಿಗೆ ಬಳಸಲಾಗುತ್ತಿದೆ. ಈ ನೀರಿನ ಮೇಲೆ ಸ್ಥಳೀಯರಿಗೆ ಸಮಾನ ಹಕ್ಕಿದೆ ಎಂದು ಪೂರ್ವ ಭಾಗದ 106 ಗ್ರಾಮಗಳನ್ನು ದೇಗಾಂವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸೇರಿಸಬೇಕು ಎಂದು ಆಗ್ರಹಿಸಿತ್ತು. ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಡಲಾಗಿತ್ತು. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಸಿ.ಸಿ.ಪಾಟೀಲ ಸಹಕಾರದಿಂದ ನೀರು ಪೂರೈಕೆಯ ಸುಸ್ಥಿರ ಕೆಲಸಗಳು ನಡೆಯಲಿವೆ ಎಂದರು.
ತಾಲೂಕ ಅಧ್ಯಕ್ಷ ಸಂಜಯ ಕುಬಲ್ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆ ಯಶಸ್ವಿಯಾಗಲು ಜಲಮೂಲ ಸೃಷ್ಟಿಸುವುದು ಅಗತ್ಯ. ಇದಕ್ಕಾಗಿ ನವಿಲುತೀರ್ಥ ಅಣೆಕಟ್ಟೆಯಿಂದ ನೀರು ಹರಿಸಿ ದೇಗಾಂವ ನೀರಿನ ಯೋಜನೆ ಮೂಲಕ ಖಾನಾಪುರ ಹಾಗೂ ಕಿತ್ತೂರು ತಾಲೂಕಿನ ಗ್ರಾಮಗಳಿಗೆ ನೀರು ಪೂರೈಸಲಾಗುವುದು.
ಜಿಪಂ ಮಾಜಿ ಸದಸ್ಯ ಬಾಬುರಾವ ದೇಸಾಯಿ, ಸುರೇಶ ದೇಸಾಯಿ, ಪಂಡಿತ ಓಗ್ಲೆ, ನ್ಯಾಯವಾದಿ ಚೇತನ ಮನೇರಿಕರ, ರಾಜು ರೈಕ ಇತರರಿದ್ದರು.