ಜಿಲ್ಲೆ

ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರುವ ಮೈಸೂರು ವಿಶ್ವವಿದ್ಯಾಲಯ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದಾಗಿ ಪರೀಕ್ಷೆಗೆ ಹಾಜರಾಗದೆ ಪದವಿ ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ. ಇಂತಹ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರೆಲ್ಲರಿಗೂ ಪರೀಕ್ಷೆ ಬರೆಯಲು ಮೈಸೂರು ವಿವಿಯಿಂದ ಒಂದು ಅವಕಾಶ ನೀಡಲಾಗಿದೆ.

2004-05ನೇ ಸಾಲಿನಿಂದ 2018-19ನೇ ಅವಧಿಯ ಪಠ್ಯಕ್ರಮದಲ್ಲಿ ಮೂರು ವರ್ಷದ ಪದವಿ ಅವಧಿಯನ್ನು ಮುಗಿಸಿದ್ದರೂ ವಿವಿಧ ಕಾರಣದಿಂದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಸಿ.ಎ., ಬಿ.ಬಿ.ಎ/ಬಿ.ಬಿ.ಎಂ, ಬಿ.ಎಸ್.ಡಬ್ಲುೃ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿ ಅನುತ್ತೀರ್ಣರಾಗಿದ್ದು,

ಮೈಸೂರು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಹಾಗೂ ಸಂಯೋಜನೆ ಪಡೆದಿರುವ ಸರ್ಕಾರಿ, ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಮೂರು ವರ್ಷದ ಪದವಿಯ ಆರು ಸೆಮಿಸ್ಟರ್‌ಗಳ ಪೈಕಿ ಯಾವುದೇ ಸೆಮಿಸ್ಟರ್‌ನ ಯಾವುದೇ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ, ಆಯಾ ವಿಷಯಗಳ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ.

ಈ ಬಗ್ಗೆ ವಿಶ್ವವಿದ್ಯಾಲಯವು ಶೀರ್ಘದಲ್ಲೇ ಸುತ್ತೋಲೆ ಹೊರಡಿಸಲಿದ್ದು, ಪರೀಕ್ಷೆ ಬರೆಯಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಹಿಂದೆ ತಾವು ವ್ಯಾಸಂಗ ಮಾಡಿರುವ ಕಾಲೇಜಿನಲ್ಲಿ ಪರೀಕ್ಷಾ ಶುಲ್ಕ ಪಾವತಿಸಬೇಕಾಗುತ್ತದೆ. ಮೈಸೂರು ನಗರವನ್ನು ಕೇಂದ್ರವಾಗಿಸಿಕೊಂಡು ನಾಲ್ಕು ಜಿಲ್ಲೆಗಳಾದ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರದ ಪರೀಕ್ಷಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಈಗಾಗಲೇ ನಾಲ್ಕು ಜಿಲ್ಲೆಯ (ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ) ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಪ್ರಾಂಶುಪಾಲರ ಸಭೆ ನಡೆಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ.

ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸದೆ ಇರುವ ವಿದ್ಯಾರ್ಥಿಗಳ ಮಾಹಿತಿಯನ್ನು (ಹೆಸರು, ರಿ.ನಂ, ವಿಷಯ, ತರಗತಿ, ಪದವಿ ಪೂರ್ಣಗೊಳಿಸಿದ ಅವಧಿ ಇತ್ಯಾದಿ) ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾಲಯಕ್ಕೆ ನೀಡಲು ಸೂಚಿಸಲಾಗಿದೆ.

ಈ ಪರೀಕ್ಷೆಗಳನ್ನು ಮಾನಸಗಂಗೋತ್ರಿಯ ಮೌಲ್ಯಭವನದಲ್ಲಿ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಎಚ್.ಮಹದೇವಸ್ವಾಮಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಮಾಹಿತಿಗಾಗಿ ಅವರ ಮೊ.: 9035235245 ಹಾಗೂ ಕಚೇರಿ ಸಂಖ್ಯೆ: 0821-2419273 ಸಂಪರ್ಕಿಸಬಹುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.