ಜಿಲ್ಲೆ

ಅನುಚಿತ ವರ್ತನೆ ಖಂಡಿಸಿ ಪ್ರತಿಭಟನೆ

ಚಿತ್ರದುರ್ಗ: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಕರುನಾಡ ವಿಜಯಸೇನೆ ಕಾರ್ಯಕರ್ತರ ಮೇಲೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ರಸ್ತೆ ವಿಸ್ತರಣೆ ವೇಳೆ ಈ ಕಾಲೇಜಿನ ತಡೆಗೋಡೆ ತೆರವುಗೊಳಿಸಲಾಗಿತ್ತು. ಆದರೆ, ಪುನಃ ನಿರ್ಮಿಸಲು ಯಾವುದೇ ಕ್ರಮವಹಿಸಿಲ್ಲ. ಬಾಲಕಿಯರ ಕಾಲೇಜು ಆಗಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ಯಾವ ಕ್ರಮವಹಿಸಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಅನುಚಿತವಾಗಿ ವರ್ತಿಸಿದ್ದು, ನಗರ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದೇವೆ. ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮೂಲಸೌಕರ್ಯ ಸೇರಿ ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲವಾಗಿದೆ. ತಡೆಗೋಡೆ ಇಲ್ಲದ ಕಾರಣ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆ ಇದೆ. ಮನೆ ಪಾಠಕ್ಕೆ ಬರದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತ್ಯಾಗದ ಮರಗಳು ಕಾಣೆಯಾಗಿವೆ. ಹೀಗಾಗಿ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಗೋಪಿನಾಥ್, ಜಗದೀಶ್, ರತ್ನಮ್ಮ, ಸುರೇಶ್, ಅಖಿಲೇಶ್, ಮಹಮ್ಮದ್ ರಫಿ, ಶಾನ್ ಇತರರಿದ್ದರು.