ಮೂಡಿಗೆರೆ: ಹಳೇಮೂಡಿಗೆರೆ ಗ್ರಾಪಂ ಎದುರು ವಸತಿಗಾಗಿ ಹೋರಾಟ ವೇದಿಕೆಯಿಂದ ನಿವೇಶನಕ್ಕಾಗಿ ಒತ್ತಾಯಿಸಿ ನಡೆಯುತ್ತಿದ್ದ ಸ್ಥಳಕ್ಕೆ ಶನಿವಾರ ಗ್ರಾಪಂ ಅಧ್ಯಕ್ಷೆ ಡಿ.ರಂಜಿತಾ, ತಾಪಂ ಇಒ ದಯಾವತಿ, ಪಿಡಿಒ ಪ್ರಶಾಂತ್, ಕಂದಾಯ ಇಲಾಖೆ ಅಧಿಕಾರಿಗಳಾದ ಚಂದ್ರ, ಕಿರಣ್ ಭೇಟಿ ನೀಡಿ ಲಿಖಿತ ರೂಪದಲ್ಲಿ ಭರವಸೆ ನೀಡಿದ ಬಳಿಕ ಅನಿರ್ದಿಷ್ಟಾವಧಿ ಧರಣಿ ಅಂತ್ಯವಾಯಿತು.
ಧರಣಿ ನೇತೃತ್ವ ವಹಿಸಿದ್ದ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ನಿವೇಶನಕ್ಕಾಗಿ ಮಂಜೂರಾಗಿರುವ ಜಾಗದಲ್ಲಿ ರಸ್ತೆ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡಿದ್ದಾರೆ. ಮಾ.18ರಂದು ನಿವೇಶನ ರಹಿತರ ಪಟ್ಟಿ ತಯಾರಿಕೆಗೆ ವಿಶೇಷ ಗ್ರಾಮಸಭೆ ಕರೆಯಲಾಗಿದೆ. ಅದೇ ದಿನ ನಿವೇಶನ ಹಂಚಿಕೆಗಾಗಿ ಫಲಾನುಭವಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದಾಗ ಭರವಸೆ ನೀಡಿ ನುಣುಚಿಕೊಂಡಿದ್ದಾರೆ. ಹಿಂದಿನಂತೆ ಮಾತು ನೀಡಿ ಉದಾಸೀನತೆ ತೋರಿದರೆ ಮರು ದಿನವೇ ಮತ್ತೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು. ಅಧಿಕಾರಿಗಳು ನಮ್ಮ ಹೋರಾಟವನ್ನು ಹಗುರವಾಗಿ ಪರಿಗಣಿಸದೆ ವಸತಿ ರಹಿತರ ಸಮಸ್ಯೆ ಅರಿತು ಲಿಖಿತವಾಗಿ ನೀಡಿರುವ ಭರವಸೆಯನ್ನು ನಿಗದಿತ ಅವಧಿಯಲ್ಲಿ ಈಡೇರಿಸಬೇಕು. ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇಕಾಬಿಟ್ಟಿ ಭರವಸೆ ನೀಡಿ ನಮ್ಮನ್ನು ದಾರಿ ತಪ್ಪಿಸಿ ಹೋಗಿದ್ದಾರೆ. ಅವರ ಭರವಸೆ ಇದುವರೆಗೂ ಈಡೇರಿಲ್ಲ. ಹಿಂದಿನಂತೆ ದಾರಿ ತಪ್ಪಿಸುವ ಕೆಲಸ ಮಾಡಿದರೆ ಪರಿಣಾಮ ನೆಟ್ಟಗಿರದು. ನಿವೇಶನ ಹಂಚಿಕೆಗೆ ಹಾಗೂ ದಾರಿ ಸಮಸ್ಯೆಗೆ ಮುಕ್ತಿ ದೊರಕಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಹಳೇಮೂಡಿಗೆರೆ ಗ್ರಾಪಂ ಸದಸ್ಯೆ ಜಾನಕಿ, ಕಾರ್ಮಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ರಾಜೇಶ್, ರವಿ, ರಮೇಶ್, ಆಯಿಷಾ ಭಾನು, ಉನ್ನಸಾ, ಫಾತಿಮಾ, ಜೊಹರಾ, ರುಕ್ಕಿಣಿ, ಗೀತಾ, ವಿನೋದ್, ಸುಮಯ್ಯ, ಪ್ರಮೀಳಾ, ರಾಧಾ, ರತ್ನಮ್ಮ, ಶಾರದಾ, ವನಜಾ, ಬಿ.ರಾಮು, ಶೇಖರ್, ಮಂಜುಳಾ, ಯಶೋದಾ, ನಾಗಮ್ಮ, ಲಲಿತಾ ಇತರರಿದ್ದರು.