ಜಿಲ್ಲೆ

ಅನಾರೋಗ್ಯದ ಲಕ್ಷಣವಿದ್ದರೆ ಚಿಕಿತ್ಸೆ ಪಡೆಯಿರಿ

ಹೊಳೆನರಸೀಪುರ: ಎರಡು ವಾರಕ್ಕಿಂತ ಹೆಚ್ಚಿನ ದಿನಗಳು ಕೆಮ್ಮು ಇರುವುದು, ಸುಸ್ತು, ಜ್ವರ, ಚಳಿ, ರಾತ್ರಿ ಬೆವರುವುದು, ಎದೆ ನೋವು, ಉಸಿರಾಟದ ಸಮಸ್ಯೆ, ಹಸಿವಾಗದಿರುವುದು ಮತ್ತು ದೇಹದ ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯವೆಂದು ಮೂಡಲಹಿಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಯಶುಮತಿ ತಿಳಿಸಿದರು.


ತಾಲೂಕಿನ ಕಸಬಾ ಹೋಬಳಿ ಮೂಡಲಹಿಪ್ಪೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಆರೋಗ್ಯ ಯೋಜನೆಯಡಿ ಮಂಗಳವಾರ ಆಯೋಜಿಸಲಾಗಿದ್ದ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.


2025ಕ್ಕೆ ಕ್ಷಯಮುಕ್ತ ಭಾರತ ಸಂಕಲ್ಪದೊಂದಿಗೆ ಕ್ಷಯ ರೋಗ ಸಂಪೂರ್ಣ ನಿರ್ಮೂಲನೆಗಾಗಿ ಪ್ರತಿ ಮನೆಗೆ ಭೇಟಿ ನೀಡಿ ಸಕ್ರಿಯ ರೋಗ ಲಕ್ಷಣ ಹೊಂದಿದವರ ಬಗ್ಗೆ ಮಾಹಿತಿ ಸಂಗ್ರಹಿಸಿ, ರೋಗಿಗಳ ಮನೆಗೆ ತೆರಳಿ ಚಿಕಿತ್ಸೆ ನೀಡಲಾಗುತ್ತೆ. ಆದರೆ ರೋಗ ಲಕ್ಷಣ ಇರುವ ವ್ಯಕ್ತಿಯೂ ಯಾವುದೇ ಅಂಜಿಕೆ, ಭಯ ಅಥವಾ ಒತ್ತಡಕ್ಕೆ ಸಿಲುಕಿ ಚಿಕಿತ್ಸೆ ಪಡೆಯಲು ತಡ ಮಾಡಬಾರದು. ಜೀವ ಭಯವಿರುವ ಕಾರಣದಿಂದ ಪ್ರಾರಂಭದಲ್ಲೆ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿ, ಸೂಕ್ತ ಚಿಕಿತ್ಸೆ ಪಡೆದಲ್ಲಿ ಗುಣಮುಖರಾಗಿ ನೆಮ್ಮದಿಯ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.


ಮೂಡಲಹಿಪ್ಪೆ ಗ್ರಾ.ಪಂ. ಪಿಡಿಒ ರಂಗಸ್ವಾಮಿ, ಗ್ರಾಮ ಆರೋಗ್ಯ ತಾಲೂಕು ಸಂಯೋಜಕ ಐ.ಕೆ.ರಮೇಶ್, ಶುಶ್ರೂಷಕಿ ಮಂಜುಳಾ, ಆಶಾ ಕಾರ್ಯಕರ್ತೆಯರಾದ ಶಶಿಕಲಾ, ರಾಜೇಶ್ವರಿ, ಮಂಜುಳಾ ಇತರರು ಇದ್ದರು.