ಜಿಲ್ಲೆ

ಅನಾಥರಿಗೊಂದು ಆಶ್ರಮಧಾಮ!

ರಮೇಶ ಹಾರ್ಸಿಮನೆ ಸಿದ್ದಾಪುರ

ಹುಟ್ಟಿದ ಕೆಲವೇ ದಿನದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ವ್ಯಕ್ತಿ ಈಗ ಹತ್ತಾರು ಅನಾಥರಿಗೆ ಆಶ್ರಯದಾತರಾಗಿದ್ದಾರೆ.

ರಸ್ತೆ ಬದಿಯಲ್ಲಿ ದಿಕ್ಕಿಲ್ಲದೆ ಕುಳಿತ ವೃದ್ಧರು, ಅಂಗವಿಕಲರನ್ನು ರಕ್ಷಣೆ ಮಾಡಿ, ಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ತಾಲೂಕಿನ ಮಗದೂರಿನ ನಾಗರಾಜ ನಾಯ್ಕ ಕಳೆ ಕೆಲ ವರ್ಷಗಳಿಂದ ಪ್ರಚಲಿತ ಆಶ್ರಮಧಾಮ ಎಂಬ ಅನಾಥಾಶ್ರಮ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಅನಾಥರನ್ನು ರಕ್ಷಿಸಿ ಪೋಷಿಸಿದ್ದಾರೆ.

ನಾಗರಾಜ ನಾಯ್ಕ ಮೂಲತಃ ಅಂಕೋಲಾ ತಾಲೂಕಿನ ಹಟ್ಟಿಕೇರಿ ಕೆಂದಿಗೆಯವರು. ಹುಟ್ಟಿದ 14ನೇ ದಿನಕ್ಕೇ ತಮ್ಮ ತಾಯಿಯನ್ನು ಕಳೆದುಕೊಂಡು, ತಬ್ಬಲಿಯಾಗಿ ಬೆಳೆದರು. ಉಡುಪಿಯ ಹೋಟೆಲ್ ಒಂದರಲ್ಲಿ ಸ್ವಲ್ಪ ವರ್ಷ ಕೆಲಸ ಮಾಡಿದರು.

ತಾನು ಅನಾಥನಾಗಿ ಪಟ್ಟ ಕಷ್ಟಗಳು ಬೇರೆಯವರಿಗೆ ಬರಬಾರದು ಎಂಬ ಕಾರಣಕ್ಕೆ ಅನಾಥಾಶ್ರಮ ಪ್ರಾರಂಭಿಸಿದ್ದಾರೆ. ಶಿರಸಿ ಹಲಗೇರಿಯಲ್ಲಿ ಕೆಲ ದಿನ ಅನಾಥಾಶ್ರಮ ನಡೆಸಿ ಈಗ ಎರಡು ವರ್ಷದಿಂದ ಮುಗದೂರಿನಲ್ಲಿ ಪ್ರಚಲಿತ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಅನಾಥರ ಬಾಳಿಗೆ ಬೆಳಕಾಗಿದ್ದಾರೆ.

ದಾನವೇ ಆಧಾರ: ನಾಗರಾಜ ನಾಯ್ಕ ಅವರಿಗೆ ಸ್ವಂತ ಮನೆ ಇಲ್ಲ. ಬಾಡಿಗೆ ಮನೆಯಲ್ಲೇ ಅನಾಥಾಶ್ರಮ ನಡೆಸುತ್ತಿದ್ದಾರೆ. ಶಿರಸಿಯ ತರಕಾರಿ ಅಂಗಡಿಯವರು ತರಕಾರಿಗಳನ್ನು ಉಚಿತವಾಗಿ ನೀಡುತ್ತಾರೆ. ಇನ್ನೂ ಹಲವರು ದಾನಿಗಳು ನೀಡುವ ಅಕ್ಕಿ, ಬೆಳೆಯ ಸಹಕಾರದಿಂದ ನಾಗರಾಜ ನಾಯ್ಕ ಅವರು ನಿರ್ಗತಿಕರಿಗೆ ನೆರವಾಗುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಮಮತಾ ನಾಯ್ಕ ಎಂಬುವವರು ಆಶ್ರಮದ ಮೇಲುಸ್ತುವಾರಿ ವಹಿಸಿಕೊಂಡು ಬೆಂಬಲವಾಗಿ ನಿಂತಿದ್ದಾರೆ.

ಪಾರ್ಶ್ವ ವಾಯುವಿಗೆ ಒಳಗಾದವರು, ಮಧುಮೇಹದಿಂದ ಗಾಯ ಮಾಸದೇ ತೊಂದರೆಗೀಡಾದವರು, ರಸ್ತೆ ಬದಿ ಊಟಕ್ಕಿಲ್ಲದೇ ಓಡಾಡುವವರನ್ನು ಕಂಡರೆ ಸ್ವತಃ ಹೋಗಿ ಬಾಡಿಗೆ ವಾಹನ ಮಾಡಿಕೊಂಡು ಅವರನ್ನು ಕರೆತರುತ್ತಾರೆ. ಮುಟ್ಟಲೂ ಹೇಸಿಗೆಯಾಗುವ ಪರಿಸ್ಥಿತಿಯಲ್ಲಿ ಇರುವವರನ್ನು ಸ್ವತಃ ಸ್ನಾನ ಮಾಡಿಸಿ, ಶೇವಿಂಗ್ ಮಾಡಿ, ಔಷಧೋಪಚಾರ ಮಾಡುತ್ತಾರೆ. ಅವರನ್ನು ಎತ್ತಿಕೊಂಡೇ ಆಸ್ಪತ್ರೆಗೆ ಸಾಗಿಸುವುದೂ ಇದೆ. ಅವರ ಕಥೆ ಕೇಳಿ ಪ್ರೀತಿ, ಕರುಣೆಯಿಂದ ಊಟ ಮಾಡಿಸುತ್ತಾರೆ. ಹಲವರು ಬಾರಿ ಇವರ ಕಾರ್ಯಕ್ಕೆ ಪೊಲೀಸರು ಸಹಕಾರ ನೀಡುತ್ತಾರೆ. ಸದ್ಯ ಶಿರಸಿ, ಸಿದ್ದಾಪುರ, ಅಂಕೋಲಾ,ರಾಜಸ್ಥಾನ, ತೆಲಂಗಾಣಕ್ಕೆ ಸೇರಿದ 8 ಮಹಿಳೆಯರು, 5 ಪುರುಷರು ಸೇರಿ 13 ಅನಾಥರು ಇವರ ಆಶ್ರಮದಲ್ಲಿದ್ದಾರೆ.

ಅನಾಥಾಶ್ರಮದಲ್ಲಿದ್ದವರ ವಾರಸು ದಾರರು ಬಂದರೆ ಪೊಲೀಸರ ಸಮಕ್ಷಮ ಪೂರ್ವಾಪರ ವಿಚಾರಿಸಿ ಅವರ ಜತೆ ಕಳುಹಿಸುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ಮೃತಪಟ್ಟ ಆರು ಜನರ ಶವಸಂಸ್ಕಾರವನ್ನು ಹಿಂದು ಧರ್ಮದ ವಿಧಿ ವಿಧಾನದಂತೆ ನಾಗರಾಜ ನಾಯ್ಕ ಮಾಡಿದ್ದಾರೆ. ಆಸಕ್ತರು 9481389187 ದೂರವಾಣಿ ಸಂಖ್ಯೆ ಮೂಲಕ ಅವರನ್ನು ಸಂರ್ಪಸಬಹುದು.

ಆಶ್ರಯಧಾಮ ನಡೆಸುವುದಕ್ಕೆ ಸರ್ಕಾರದಿಂದ ಒಂದು ರೂಪಾಯಿ ಬರುತ್ತಿಲ್ಲ. ದಾನಿಗಳ ಸಹಕಾರದಿಂದ ನಡೆಸುತ್ತಿದ್ದೇನೆ. ಸ್ವಂತ ಮನೆ ಕಟ್ಟಿ ಆಶ್ರಯಧಾಮ ನಡೆಸುವ ಉದ್ದೇಶ ಇದೆ. ಮುಖ್ಯವಾಗಿ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸುತ್ತಿದ್ದಾರೆ. | ನಾಗರಾಜ ನಾಯ್ಕ ಪ್ರಚಲಿತ ಆಶ್ರಯಧಾಮದ ಅಧ್ಯಕ್ಷ
ಅನಾಥರ ಸೇವೆ ಮಾಡುವುದು ನನ್ನ ಸೌಭಾಗ್ಯ.ಇಲ್ಲಿ ಎಲ್ಲ ವಯೋಮಾನದವರಿದ್ದಾರೆ. ಅವರ ಮನಸ್ಸು ಮಾತ್ರ ಮಕ್ಕಳಂತೆ. ಆರೈಕೆ ಮಾಡುವುದರಲ್ಲಿ ತೃಪ್ತಿ ಇದೆ. | ಮಮತಾ ನಾಯ್ಕ ಆಶ್ರಮಧಾಮದ ಮೇಲ್ವಿಚಾರಕಿ