ಬೀದರ್: ಪ್ರಸಕ್ತ ಸಾಲಿನಲ್ಲಿ ನರ್ಸರಿಯಿಂದ 10ನೇ ತರಗತಿ ವರೆಗೆ 10 ಅನಾಥ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ಕಲ್ಪಿಸುವುದಾಗಿ ಇಲ್ಲಿಯ ಕುಂಬಾರವಾಡ ರಸ್ತೆಯಲ್ಲಿ ಇರುವ ನವೀನ್ ಪಬ್ಲಿಕ್ ಸ್ಕೂಲ್ ಘೋಷಿಸಿದೆ.
ತಂದೆ, ತಾಯಿ ಇಲ್ಲದ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಉಚಿತ ಶಿಕ್ಷಣ ಕೊಡಲು ನಿರ್ಧರಿಸಲಾಗಿದೆ ಎಂದು ನವೀನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ತಿಳಿಸಿದ್ದಾರೆ.
ಆರ್ಥಿಕ ಸಮಸ್ಯೆ ಕಾರಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ಅಂಥ 50 ಮಕ್ಕಳಿಗೆ ಶುಲ್ಕದಲ್ಲಿ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಅನಾಥ ಮಕ್ಕಳು ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7022513111 ಅಥವಾ 9341785820 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.