ಜಿಲ್ಲೆ

ಅನಾಥ ಬಾಲಕಿ ಅಂಬೇಡ್ಕರ್ ವಸತಿಶಾಲೆಗೆ

ಎನ್.ವೆಂಕಟೇಶ್

ಬಾಲಕಿಯನ್ನು ಖುದ್ದು ಶಾಲೆಗೆ ಸೇರಿಸಿದ ಪ್ರದೀಪ್ ಈಶ್ವರ್

ಗೌರಿಬಿದನೂರು : ನಗರದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಬುಧವಾರ ಅಚ್ಚರಿ ಕಾದಿತ್ತು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಶಾಲೆಗೆ ಭೇಟಿ ನೀಡಿ ಬೆರಗು ಹುಟ್ಟಿಸಿದ್ದರು. ಶಾಸಕರಿಗೆ ಇಲ್ಲಿನ ಶಾಲೆಯಲ್ಲಿ ಏನು ಕೆಲಸ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಅವರು ಬಂದಿದ್ದು, ಹೆತ್ತವರಿಲ್ಲದ ಅನಾಥ ಬಾಲಕಿಯನ್ನು ಶಾಲೆಗೆ ಸೇರಿಸಲು.

ಕಾರಿನಲ್ಲಿ ಕರೆತಂದು ದಾಖಲು

ತಾಲೂಕಿನ ದ್ವಾರಗಾನಹಳ್ಳಿಯ ಲೀಲಾ ಎಂಬ ಬಾಲಕಿ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾಳೆ. ಇತ್ತೀಚೆಗೆ ಮಂತ್ರಾಲಯದಲ್ಲಿ ಪ್ರವಾಹಕ್ಕೆ ಸಿಲುಕಿ ತಂದೆ ಕೂಡ ಮೃತಪಟ್ಟಿದ್ದಾರೆ. ಹೆತ್ತವರಿಲ್ಲದೆ ಲೀಲಾ ಅನಾಥಳಾಗಿದ್ದಳು. ಸಂಬಂಧಿಕರ ಪೋಷಣೆಯಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈ ವಿಷಯ ತಿಳಿದ ಪ್ರದೀಪ್ ಈಶ್ವರ್ ಖುದ್ದು ಗ್ರಾಮಕ್ಕೆ ತೆರಳಿ ಲೀಲಾಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಹೇಳಿ ಆಕೆಯನ್ನು ತಮ್ಮ ಕಾರಿನಲ್ಲೇ ಕರೆತಂದು ಗೌರಿಬಿದನೂರಿನ ಅಂಬೇಡ್ಕರ್ ವಸತಿ ಶಾಲೆಗೆ ದಾಖಲಿಸಿದ್ದಾರೆ.

ವಸತಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಉಚಿತ ಊಟ, ವಸತಿ ಜತೆಗೆ ಶಿಕ್ಷಣ ದೊರೆಯಲಿದೆ. ಬಳಿಕ 12ನೇ ತರಗತಿವರೆಗೆ ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಲ್ಲಿ ಉಚಿತ ಪ್ರವೇಶ ಮತ್ತು ಶಿಕ್ಷಣ ನೀಡಲಾಗುವುದು ಎಂದು ಶಾಸಕರಿಗೆ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಆಂಜಿನಪ್ಪ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ನಾಯ್ಕರ್ ಹಾಗೂ ಸಿಬ್ಬಂದಿ ಹಾಜರಿದ್ದರು.