ಚಿಕ್ಕಬಳ್ಳಾಪುರ: ಸಮಯದಷ್ಟೇ ನೀರು ಸಹ ಅಮೂಲ್ಯವಾದುದು. ಈ ಎರಡನ್ನು ಯೋಚಿಸಿ, ಸಮರ್ಪಕವಾಗಿ ಬಳಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹೇಳಿದರು. ನಗರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಗೆ ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ನೀರು ಪ್ರಕೃತಿಯ ಅವಿಭಾಜ್ಯ ಅಂಶ. ಇದು ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಇದರ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ನೀರಿನ ಸಂರಕ್ಷಣೆ ಮಾಡಬೇಕು. ಈಗಾಗಲೇ ಹಲವೆಡೆ ಹಾಹಾಕಾರದಿಂದ ಜನರು ತೊಂದರೆ ಅನುಭವಿಸುತ್ತಿರುವ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಅನವಶ್ಯಕ ಪೋಲಾಗುವುದಕ್ಕೆ ಅವಕಾಶ ನೀಡಬಾರದು ಎಂದರು.
ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ಬಯಲು ಸೀಮೆ ಭಾಗದಲ್ಲಿ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಹ ಗಂಭೀರ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಸಿಗುವ ಅಲ್ಪ ಪ್ರಮಾಣದ ನೀರಿನಲ್ಲೂ ಫ್ರೋರೈಡ್, ನೈಟ್ರೇಟ್ ಅಂಶಗಳು ಹೆಚ್ಚಾಗಿವೆ. ಇದನ್ನು ಸೇವಿಸಿ ಬಹುತೇಕ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಬೇಕು. ಇದಕ್ಕೆ ಮಳೆ ನೀರಿನ ಸಂರಕ್ಷಣೆ ಜತೆ ಜತೆಗೆ ಭೂಮಿಯಲ್ಲಿ ಇಂಗಿಸುವ ಕೆಲಸವಾಗಬೇಕು. ಆಗ ಮಾತ್ರ ನೀರಿನ ಹಾಹಾಕಾರ ಸಮಸ್ಯೆ ನೀಗಿಸಬಹುದಾಗಿದೆ ಎಂದರು.
ನೀರಿನ ಜಾಗೃತಿಯು ಕೇವಲ ವಿಶ್ವ ಜಲದಿನಕ್ಕೆ ಸೀಮಿತವಾಗಬಾರದು. ಇದು ನಿರಂತರ ಅಭಿಯಾನವಾಗಬೇಕು. ಈಗಲೇ ನೀರಿನ ಸಮಸ್ಯೆಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಜಿ.ಟಿ.ರಾಜು ಮಾತನಾಡಿ, ವರ್ಷದಿಂದ ವರ್ಷಕ್ಕೆ ಜನಸಂಖ್ಯೆಯು ಏರಿಕೆಯಾದಂತೆ ನೀರಿನ ಬಳಕೆಯೂ ಹೆಚ್ಚಾಗುತ್ತಿದೆ. ಶುದ್ಧವಾದ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ಶ್ರಮಿಸುತ್ತಿದೆ. ಇದಕ್ಕೆ ಪ್ರತಿ ವರ್ಷ ಮಾ.22ರಂದು ಜಲ ದಿನ ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಸ್ಥಿರ ಅಂತರ್ಜಲ ಅಭಿವೃದ್ಧಿಯ ಗುರಿ ಕಾರ್ಯಕ್ರಮದ ಘೋಷಣೆಯಾಗಿದೆ ಎಂದರು.
ಕೇವಲ ಕಾರ್ಯಕ್ರಮಗಳ ಭಾಷಣಗಳಿಗೆ ಸೀಮಿತವಾಗದೇ ಜೀವಸಂಕುಲದ ಪ್ರಮುಖ ಭಾಗವಾಗಿರುವ ಗಾಳಿ, ನೀರು, ಆಹಾರ ಸಂರಕ್ಷಣೆಯಲ್ಲಿ ಬದ್ಧತೆ ತೋರಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಜನರ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಎಇಇ ರವೀಂದ್ರನಾಥ್, ಹಿರಿಯ ವಿಜ್ಞಾನಿ ಎಸ್.ಬೋರಪ್ಪ, ಕಾಲೇಜಿನ ರಿಜಿಸ್ಟರ್ ಜೆ.ಸುರೇಶ್, ಪ್ರಾಧ್ಯಾಪಕರಾದ ಜಿ.ನಾರಾಯಣ, ಎಂ.ಎನ್.ವತ್ಸಲ, ವಕೀಲ ಮಂಜುನಾಥ್ ಮತ್ತಿತರರು ಇದ್ದರು.