ಧಾರವಾಡ: ಇಲ್ಲಿಯ ಹೆಬ್ಬಳ್ಳಿ ರಸ್ತೆಯ ಬಳಿ ನಿರ್ವಿುಸಿದ್ದ ಅನಧಿಕೃತ ಲೇಔಟ್(ವಸತಿ ವಿನ್ಯಾಸ)ಗಳನ್ನು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ(ಹುಡಾ) ವತಿಯಿಂದ ಶುಕ್ರವಾರ ತೆರವು ಮಾಡಲಾಯಿತು.
ಹುಡಾ ಪರವಾನಗಿ ಪಡೆಯದೆ ನಿವೇಶನಗಳನ್ನು ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ, ನೋಟಿಸ್ ಪಡೆದವರು ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಿವೇಶನಗಳಲ್ಲಿ ಅಳವಡಿಸಿದ್ದ ಗುರುತು ಕಲ್ಲು, ರಸ್ತೆ, ಚರಂಡಿ, ವಿದ್ಯುತ್ ಕಂಬ ಸೇರಿ ಇತರ ಸೌಲಭ್ಯಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಯಿತು.
ತೆರವು ಕಾರ್ಯದ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಲೇಔಟ್ ಮಾಲೀಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ತೆರವು ಕಾರ್ಯಾಚರಣೆ ಮಾಡಬೇಡಿ ಎಂದು ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಸಾಮಾಜಿಕ ಹೋರಾಟಗಾರ ಬಸವರಾಜ ಜಾಧವ ಸಹ ಯಾವುದೇ ಕಾರಣಕ್ಕೆ ತೆರವು ಕಾರ್ಯಾಚರಣೆ ನಡೆಸಕೂಡದು ಎಂದು ಒತ್ತಾಯಿಸಿದರು. ಹುಡಾ ಅಧಿಕಾರಿಗಳು ನಿರ್ಧಾರ ಬದಲಿಸುವುದಿಲ್ಲ ಎಂದು ಕಂಡುಬಂದಾಗ ಜೆಸಿಬಿ ಎದುರು ನಿಂತು ಪ್ರತಿಭಟನೆಗೆ ಮುಂದಾದರು. ಆದರೆ, ಅಕ್ರಮ ತೆರವು ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿ, ಖಡಕ್ ಎಚ್ಚರಿಕೆ ನೀಡಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ನಾಗೇಶ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ 177 ಅನಧಿಕೃತ ಲೇಔಟ್ಗಳನ್ನು ಗುರುತಿಸಲಾಗಿದೆ. ತಿಂಗಳ ಹಿಂದೆಯೇ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಅವರು ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆಗೆ ಮುಂದಾಗಿಲ್ಲ. ಹೀಗಾಗಿ, ಮುಂದೆ ಉಂಟಾಗುವ ತೊಂದರೆಗಳನ್ನು ಗಮನದಲ್ಲಿ ಇಟ್ಟುಕೊಂಡು ತೆರವು ಮಾಡಲಾಗುತ್ತಿದೆ ಎಂದರು.
ನಗರದಲ್ಲಿ ಶುಕ್ರವಾರ ಒಟ್ಟು 5 ಲೇಔಟ್ ತೆರವು ಮಾಡಲಾಗಿದೆ. ತೆರವಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಾಗಿ ಹುಡಾ ಅಧಿಕಾರಿಗಳೊಂದಿಗೆ ಶನಿವಾರ ಚರ್ಚೆ ನಡೆಸಿ, 2 ದಿನಗಳಲ್ಲಿ ಎಲ್ಲ ಲೇಔಟ್ ಮಾಲೀಕರ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗುವುದು. ಸಭೆಯಲ್ಲಿ ಸ್ವಯಂ ತೆರವಿಗೆ ಲೇಔಟ್ನವರಿಗೆ ಸೂಚಿಸಲಾಗುವುದು. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರ ಲೇಔಟ್ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮತ್ತೆ ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹುಡಾ ಸದಸ್ಯ ಚಂದ್ರಶೇಖರ ಗೋಕಾಕ, ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಟಿಪಿಎಂ ವಿವೇಕ ಕಾರೇಕರ, ಬಸವರಾಜ ದೇವಗಿರಿ, ಮುಕುಂದ ಜೋಶಿ, ಸಿಬ್ಬಂದಿ, ಇತರರು ಇದ್ದರು.
90 ಎಕರೆ ಜಮೀನು ಪರಿವರ್ತನೆಗೆ ಅರ್ಜಿ ಸಲ್ಲಿಕೆ
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾಸಿಕ ಅಂದಾಜು 45 ಎಕರೆ ಜಮೀನನ್ನು ಲೇಔಟ್ ಆಗಿ ಪರಿವರ್ತಿಸುವ ಕುರಿತು ಅರ್ಜಿಗಳು ಬರುತ್ತಿದ್ದವು. ಬಿಗಿ ಕ್ರಮ ಕೈಗೊಂಡ ಬಳಿಕ ಕೆಲ ದಿನಗಳ ಹಿಂದೆ ಅಂದಾಜು 90 ಎಕರೆ ಜಮೀನು ಪರಿವರ್ತನೆಗೆ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ನಾಗೇಶ ಕಲಬುರ್ಗಿ ತಿಳಿಸಿದರು. ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ, ಪರಿವರ್ತನೆ ಮಾಡಿಕೊಡಲಾಗುವುದು. ಈ ಕಾರ್ಯಕ್ಕೆ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ. ಅನಧಿಕೃತ ಲೇಔಟ್ ಬದಲು ಅಧಿಕೃತ ಲೇಔಟ್ ನಿರ್ಮಾಣ ಮಾಡಿದರೆ ಜನರೂ ಸಮಸ್ಯೆಗೆ ಸಿಲುಕುವುದಿಲ್ಲ ಎಂದರು.