ಜಿಲ್ಲೆ

ಅನಧಿಕೃತ ಬಹುಮಹಡಿ ಕಟ್ಟಡ ತೆರವಿಗೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಾರವಾರ: ಗೋಕರ್ಣದಲ್ಲಿ ಅನಧಿಕೃತವಾಗಿ ಸಿಆರ್​ರೆಡ್ ವ್ಯಾಪ್ತಿಯಲ್ಲಿ ನಿರ್ವಿುಸಿದ ಬಹು ಮಹಡಿ ಕಟ್ಟಡಗಳನ್ನು ತೆರವು ಮಾಡುವಂತೆ ಗೋಕರ್ಣ ಅಂಬಿಗ ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ ಕೃಷಿ ಭೂಮಿಯಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಕುಮಟಾ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ, ಇದುವರೆಗೆ ನಿರ್ವಣವಾಗಿರುವ ಕಟ್ಟಡವನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಲೆ ಸುಟ್ಟವರ ವಿರುದ್ಧ ಕ್ರಮಕೈಗೊಳ್ಳಿ: ಮಾರ್ಚ್ 12 ರಂದು ಗೋಕರ್ಣ ಬೇಲೆಯಲ್ಲಿ ಇಟ್ಟಿದ್ದ ಬಲೆಗಳನ್ನು 17 ಲಕ್ಷ ರೂ. ಮೌಲ್ಯದ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ. ಅದಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕು ಎಂದು ವಿನಂತಿಸಿದರು.

ಉತ್ತರ ಕನ್ನಡ ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಗ್ರೆ ನೇತೃತ್ವದಲ್ಲಿ ಮಾದೇವ ರಾಮ ಅಂಬಿಗ, ಯತೀಶ ಗೋವಿಂದ ಅಂಬಿಗ, ಅನಂತ ಶಂಕರ ಅಂಬಿಗ, ಹರೀಶ ರಾಮ ಅಂಬಿಗ, ರಮೇಶ ರಾಮ ಅಂಬಿಗ, ಸುಧಾಕರ ರಾಮಪ್ಪ ಅಂಬಿಗ ಇತರರು ಮನವಿ ಸಲ್ಲಿಕೆ ಸಂದರ್ಭದಲ್ಲಿದ್ದರು.