ಕಲಬುರಗಿ: ಅನಧಿಕೃತವಾಗಿ ಜಿಲ್ಲೆಗೆ ಪ್ರವೇಶಿಸಿ ತಿರುಗಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಕಲಬುರಗಿ ಜಿಲ್ಲಾಡಳಿತ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಭೀಮಾ ನದಿ ತೀರದ ಮೂಲಕ ಸಾಕಷ್ಟು ಜನ ಜಿಲ್ಲೆಗೆ ಆಗಮಿಸಿ ತಪಾಸಣೆಗೆ ಒಳಗಾಗದೆ ಅವರ ಊರುಗಳಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನಿಗಾ ಇಟ್ಟು ತಡೆಯಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ರಮವಾಗಿ ಬಂದವರಲ್ಲಿ ಸೋಂಕು ಇದ್ದರೆ ಇತರರಿಗೂ ಹರಡುತ್ತದೆ. ಯಾವುದೇ ನಿರಾಶ್ರಿತರು, ವಲಸಿಗರು ಹೊರ ಜಿಲ್ಲೆಗಳಿಂದ ಬಂದು ಕ್ವಾರಂಟೈನ್ನಲ್ಲಿ ಇರುವವರು ಹಸಿವಿನಿಂದ ಬಳಲಬಾರದು. ಈ ಕುರಿತು ಜಿಲ್ಲಾಡಳಿತ ಮುತುವಜರ್ಿ ವಹಿಸಬೇಕು. ಆಹಾರ ಸಾಮಗ್ರಿಗಳಲ್ಲಿ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಗೆ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬಂದು 547 ಕ್ವಾರಂಟೈನ್ ಕೇಂದ್ರಗಳಲ್ಲಿರುವ 35,723 ಜನರಿಗೆ ಅಗತ್ಯ ಸೌಕರ್ಯ ಒದಗಿಸಬೇಕು. ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಅನ್ಯ ರಾಜ್ಯಗಳಿಂದ ಆಗಮಿಸಿರುವವರಲ್ಲಿ 13,701 ಜನರ ಗಂಟಲ ದ್ರವ ಸಂಗ್ರಹಿಸಲಾಗಿದೆ. ಈವರೆಗೆ 20743 ಕೋವಿಡ್- 19 ಪರೀಕ್ಷೆ ನಡೆಸಲಾಗಿದ್ದು, 4,34,438 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಅಂತಾರಾಜ್ಯ ಚೆಕ್ ಪೋಸ್ಟ್ಗಳಲ್ಲಿ 35,723 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. 174 ಜನರನ್ನು ಐಸೋಲೇಷನ್ನಲ್ಲಿ ಇಡಲಾಗಿದೆ ಎಂಬ ಅಂಕಿ ಅಂಶ ತಮ್ಮಲ್ಲಿದ್ದು, ಅನ್ಯ ರಾಜ್ಯಗಳಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಬರುವ ನಿರೀಕ್ಷೆ ಇದ್ದು, ತಪಾಸಣೆ ನಡೆಸದೆ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದರು.
ಬೇಸಿಗೆ ಇದ್ದುದ್ದರಿಂದ ಕುಡಿಯುವ ನೀರಿನ ಅಭಾವ ಎದುರಾಗಬಹುದು. ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನರೇಗಾದಡಿ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಪಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ ಎಲ್ಲ ಪರಿಹಾರ ಯೋಜನೆಗಳು ತ್ವರಿತವಾಗಿ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆ ಆಗುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಕರೊನಾ ಸಂಬಂಧಿತ ತಪ್ಪು ಸಂದೇಶ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದರು.
ಮುಂಗಾರು ಆರಂಭವಾಗಿದ್ದು, ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕಳಪೆ ಬಿತ್ತನೆ ಬೀಜ, ನಕಲಿ ಕಂಪನಿಗಳ ರಸಗೊಬ್ಬರ ಪೂರೈಕೆ ಆಗಿರುವುದು ತಿಳಿದರೆ ತನಿಖೆ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕಲುಬುರಗಿ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್, ಡಿಸಿಎಂ ಆಪ್ತ ಕಾರ್ಯದರ್ಶಿ ವಿ.ಶ್ರೀನಿವಾಸ ಇದ್ದರು.