ಬಾಗಲಕೋಟೆ ನಗರದ ಪ್ರೇಸ್‌ಕ್ಲಬ್‌ನಲ್ಲಿ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಜಿಲ್ಲೆ

ಅನಧಿಕೃತ ಗೋರಿಗಳನ್ನು ಸ್ಥಳಾಂತರಿಸಿ

ಬಾಗಲಕೋಟೆ: ಬಾಬಾಬುಡನಗೇರಿ ಗುರು ದತ್ತಾತ್ರೇಯ ಪವಿತ್ರ ಕ್ಷೇತ್ರವಾಗಿದೆ. ಹಿಂದುಗಳ ಆರಾಧಿಸುವ ಐತಿಹಾಸಿಕ ಸ್ಥಳವಾಗಿದೆ. ಹೀಗಾಗಿ ಅಲ್ಲಿರುವ ಅತಿಕ್ರಮಣ ಗೋರಿಗಳು ಬೇರೆಡೆ ಸ್ಥಳಾಂತರಿಸಬೇಕು ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಆಗ್ರಹಿಸಿದರು.

ನಗರದ ಪ್ರೇಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯ ೧೯ ವರ್ಷದ ಹೋರಾಟದ ಫಲವಾಗಿ ದತ್ತಪೀಠದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಇನಾಂ ಅಡಿ ದತ್ತಪೀಠಕ್ಕೆ ಬಹುವರ್ಷಗಳ ಹಿಂದೆಯೇ ಭೂಮಿ ಹಸ್ತಾಂತರವಾಗಿದೆ. ಹಿಂದುಗಳ ಧಾರ್ಮಿಕ, ಭಾವನೆಗಳ, ಹಕ್ಕುಗಳಿಗೆ ನ್ಯಾಯಾಲಯ ಮನ್ನಣೆ ನೀಡಿದೆ.

ಇದರ ಪರಿಣಾಮ ಅಲ್ಲಿದ್ದ ಗೋರಿಗಳಿಗೆ ಹಾಕಿದ್ದ ಹಸಿರು ಬಟ್ಟೆ, ಧ್ವಜ ತೆರವಾಗಿದೆ. ಗೋಹತ್ಯೆ, ಗೋಮಾಂಸ ಭಕ್ಷಣೆ ನಿರ್ಬಂಧವಾಗಿದೆ. ನಮಾಜ್, ಮೈಕ ಬಂದ್ ಆಗಿವೆ. ಹಿಂದು ಅರ್ಚಕರ ನೇಮಕವಾಗಿ ಪೂಜೆ, ಪುನಸ್ಕಾರ, ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ದತ್ತಪೀಠ ಹಿಂದೂ ಪೀಠ ಅಂತ ಘೋಷಣೆ ಆಗಬೇಕು. ದತ್ತಪೀಠ ಮುಜರಾಯಿ ಇಲಾಖೆ ಅಧೀನದಲ್ಲಿ ಇರುವುದರಿಂದ ಅಲ್ಲಿ ನಡೆಯುವ ಉರುಸ್ ಬಂದ ಮಾಡಬೇಕು. ಬರುವ ಭಕ್ತರಿಗಾಗಿ ನಿತ್ಯ ಪ್ರಸಾದ ವ್ಯವಸ್ಥೆ, ಯಾತ್ರಿ ನಿವಾಸ, ಉಪನಯನ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಗಳಿಗೆ ಅವಕಾಶ ನೀಡಬೇಕು. ಸಾಧು, ಸಂತರಿಗೆ ದರ್ಶನಕ್ಕೆ ಮುಕ್ತ ಅವಕಾಶ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.

ಅ.೩೦ ರಂದು ದತ್ತಮಾಲೆ ಧಾರಣೆ, ನ.೨ ರಂದು ದತ್ತ ದೀಪೋತ್ಸವ, ೪ ರಂದು ಪಡಿ ಸಂಗ್ರಹ ಹಾಗೂ ೫ ರಂದು ಬೆಳಗ್ಗೆ ೭ ಗಂಟೆಗೆ ಚಿಕ್ಕಮಗಳೂರಲ್ಲಿ ಶೋಭಾ ಯಾತ್ರೆ, ಧರ್ಮ ಸಭೆ, ದತ್ತಾಪೀಠದಲ್ಲಿ ಬೆಳಗ್ಗೆ ೧೧ ಗಂಟೆಗೆ ಪಾದುಕೆ ದರ್ಶನ, ಹೋಮ ಹವನ ಮಹಾ ಪ್ರಸಾದ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಹಾಜಿ ಪವಾರ, ಸಿದ್ದು ಬಾಲರೆಡ್ಡಿ, ಈಶ್ವರ ವಾನವಗೋಳ, ಮಲ್ಲು ಗುಡ್ಲಾಳ, ಯಲ್ಲಪ್ಪ ಬನೀಸನಕಪ್ಪ ಇದ್ದರು.