ಜಿಲ್ಲೆಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಕೋಚಿಂಗ್ ಕೇಂದ್ರಗಳು ನೋಂದಣಿಗೆ ಹಿಂದೇಟು ಹಾಕುತ್ತಿವೆ. ಈ ಮೂಲಕ ಮಾನದಂಡಗಳನ್ನು ಉಲ್ಲಂಘಿಸಿ ಅನಧಿಕೃತವಾಗಿಯೇ ಕಾರ್ಯನಿರ್ವಹಣೆಯನ್ನು ಎಗ್ಗಿಲ್ಲದೆ ನಡೆಸಿವೆ.
ನಿಯಮಬಾಹಿರವಾಗಿ ಚಟುವಟಿಕೆ ನಡೆಸುತ್ತಿರುವ ಇಂತಹ ಕೋಚಿಂಗ್ ಕೇಂದ್ರಗಳನ್ನು ಮುಚ್ಚುವ ಮೂಲಕ ಕಡಿವಾಣ ಹಾಕಬೇಕಿದೆ. ಆದರೆ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆಗಳು ಆಗುತ್ತಿಲ್ಲ ಎಂಬುದು ವಿಷಾದಕರ ಸಂಗತಿ.
ಮೈಸೂರು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಬಹಳಷ್ಟು ಕೋಚಿಂಗ್ ಕೇಂದ್ರಗಳು ಪಿಯು ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿವೆ. ಇವುಗಳು ಪಿಯು ಕಾಲೇಜಿನ ಬೋಧನೆಗೆ ಪರ್ಯಾಯವಾಗಿಯೇ ಕಾರ್ಯಚಟುವಟಿಕೆ ನಡೆಸುತ್ತಿವೆ. ಪಿಯು ಕಾಲೇಜಿಗಿಂತ ಹೆಚ್ಚಿನ ಶುಲ್ಕವನ್ನೂ ವಸೂಲಿ ಮಾಡುತ್ತಿವೆ. ಇಂತಹ ಕಡೆ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಅಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಪಾಠ ಮಾಡುತ್ತಿವೆ. ಇವುಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.
ಇವುಗಳಿಗೆ ಮೂಗುದಾರ ಹಾಕಲು ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಕೇಂದ್ರಗಳ ನೋಂದಣಿ ಕಡ್ಡಾಯಗೊಳಿಸಿದೆ. ಈ ಮೂಲಕ ಇಲಾಖೆ ಮಾನದಂಡಗಳಿಗೆ ಒಳಪಟ್ಟು ಕೇಂದ್ರಗಳನ್ನು ನಡೆಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 2024ರಲ್ಲೇ ನೋಂದಣಿ ಮಾಡಿಸಿಕೊಳ್ಳಲು ನೋಟಿಸ್ ನೀಡಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಜಿಲ್ಲೆಯಲ್ಲಿ ಬರೀ 12 ಕೋಚಿಂಗ್ ಕೇಂದ್ರಗಳು ಮಾತ್ರ ನೋಂದಾಯಿಸಿಕೊಂಡಿವೆ. ಉಳಿದ ಕೇಂದ್ರಗಳು ನಿರಾಸಕ್ತಿ ತೋರಿದ್ದು ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಾರ, ನೋಂದಣಿಯಾಗದ ಕೇಂದ್ರಗಳನ್ನು ಅನಧಿಕೃತ ಕೇಂದ್ರಗಳು ಎಂದು ಘೋಷಿಸಿ ಅವುಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಆದರೆ ಯಾವ ಪ್ರಕ್ರಿಯೆಗಳೂ ಆಗುತ್ತಿಲ್ಲ.
ನೀಟ್, ಜೆಇಇ, ಸಿಇಟಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆ ಎನ್ನುವ ಕೋಚಿಂಗ್ ಕೇಂದ್ರಗಳು ನಗರದಲ್ಲಿ ಅಣಬೆಯಂತೆ ತಲೆಯೆತ್ತಿವೆ.
ಪಾಲಕರು, ವಿದ್ಯಾರ್ಥಿಗಳನ್ನು ಮರಳು ಮಾಡುತ್ತಿದ್ದು ಕೋಚಿಂಗ್ ಮಾಫಿಯಾ ಪ್ರಬಲವಾಗಿ ಬೇರೂರುತ್ತಿದೆ. ಕೆಲ ಕೇಂದ್ರಗಳು ಪಿಯು ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಆಯಾ ಕಾಲೇಜಿನಲ್ಲೇ ಟ್ಯೂಷನ್ ನಡೆಸುತ್ತವೆ. ಕೆಲವು ಪ್ರತ್ಯೇಕ ಅಸ್ತಿತ್ವ ಹೊಂದಿದ್ದು, ಬಾಡಿಗೆ ಕಟ್ಟಡದಲ್ಲಿ ಬೋಧನೆ ಮಾಡುತ್ತವೆ. ವಿದ್ಯಾರ್ಥಿಗಳು ಕಾಲೇಜು ಹಾಗೂ ತರಬೇತಿ ಕೇಂದ್ರಗಳಿಗೂ ಹಾಜರಾಗುವ ಮೂಲಕ ಮಾನಸಿಕವಾಗಿ, ದೈಹಿಕವಾಗಿ ಬಳಲಿ ಹೋಗುತ್ತಾರೆ.
ನೀಟ್, ಸಿಇಟಿ, ಜೆಇಇ ಕೋರ್ಸ್‌ಗಳ ಪ್ರವೇಶಕ್ಕೆ ಅಗತ್ಯವಿರುವ ತರಬೇತಿ ಪಡೆದರೆ ನಿಮ್ಮ ಮಕ್ಕಳಿಗೆ ಸರ್ಕಾರದ (ಕಡಿಮೆ ಶುಲ್ಕ) ಸೀಟು ದೊರೆಯುತ್ತದೆ ಎಂಬ ಆಮಿಷವನ್ನು ಪಾಲಕರಿಗೆ ದೂರವಾಣಿ ಮೂಲಕ ಒಡ್ಡುತ್ತವೆ. ಬಹುಪಾಲು ಪಾಲಕರು, ಇಂತಹ ತರಹೇವಾರಿ ಆಮಿಷಗಳಿಗೆ ಮಾರುಹೋಗುತ್ತಾರೆ.
ಇದಕ್ಕೆ ಶ್ರೀಮಂತರು ಮಾತ್ರವಲ್ಲ, ಬಡ ವರ್ಗದ ಪಾಲಕರೂ ಇತ್ತೀಚಿನ ದಿನಗಳಲ್ಲಿ ಮಾರು ಹೋಗುತ್ತಿದ್ದಾರೆ. ಶೇ.90 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಕೇಂದ್ರಗಳು ಪ್ರವೇಶ ನೀಡುತ್ತವೆ. ಸ್ಥಳೀಯವಾಗಿ ಅಸ್ತಿತ್ವದಲ್ಲಿ ಇದ್ದೂ ಇಲ್ಲದಂತಿರುವ ಕೆಲ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ಒಂದೊಂದು ತರಬೇತಿ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾ ಶಿಕ್ಷಣವನ್ನು ದಂಧೆ ಮಾಡಿಕೊಂಡಿವೆ ಎಂಬುದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಆರೋಪವಾಗಿದೆ.
ಕೋಚಿಂಗ್ ಸೆಂಟರ್ ಸೇರುವ ವಿದ್ಯಾರ್ಥಿಗಳಿಗೆ ಪಿಯುಸಿಗೆ ಪ್ರತ್ಯೇಕ ಕಾಲೇಜಿನಲ್ಲಿ (ಸ್ಥಳೀಯವಾಗಿ ಅಸ್ತಿತ್ವದಲ್ಲಿ ಇದ್ದೂ ಇಲ್ಲದಂತಿರುವ) ಪ್ರವೇಶಾತಿಯನ್ನು ಕೇಂದ್ರಗಳೇ ನಿಗದಿ ಮಾಡುತ್ತವೆ.
ಜಿಲ್ಲೆಯಲ್ಲಿ 306 ಪದವಿಪೂರ್ವ ಕಾಲೇಜುಗಳಿವೆ. 187 ಅನುದಾನ ರಹಿತ ಖಾಸಗಿ ಕಾಲೇಜುಗಳು, 80 ಸರ್ಕಾರಿ, 25 ಅನುದಾನಿತ, 3 ಅಲ್ಪಸಂಖ್ಯಾತರ ಕಾಲೇಜು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ(ಕ್ರೈಸ್) ವ್ಯಾಪ್ತಿಯ 2 ಮುರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜು, ತಲಾ ಒಂದು ಏಕಲವ್ಯ ವಸತಿ ಪಿಯು ಕಾಲೇಜು, ಅಟಲ್ ಬಿಹಾರಿ ವಾಜಪೇಯಿ ವಸತಿ ಪಿಯು ಕಾಲೇಜುಗಳಿವೆ. ಈ ಪೈಕಿ ಖಾಸಗಿ ಪಿಯು ಕಾಲೇಜುಗಳ ಶುಲ್ಕ ಕನಿಷ್ಠ 50 ಸಾವಿರದಿಂದ 3 ಲಕ್ಷ ರೂ.ವರೆಗೆ ಇದೆ. ಅದೇ ಕೋಚಿಂಗ್‌ಗೆ ಕನಿಷ್ಠ 50 ಸಾವಿರದಿಂದ 1.50 ಲಕ್ಷ ರೂ.ವರೆಗೂ ಶುಲ್ಕ ಇದೆ. ಇಷ್ಟು ಹಣ ಹೊಂದಿಸಲು ಬಡ, ಮಧ್ಯವರ್ಗದ ಪಾಲಕರು ಹೈರಾಣರಾಗಿ ಹೋಗುತ್ತಾರೆ.
ಜಿಲ್ಲೆಯಲ್ಲಿರುವ ಕೋಚಿಂಗ್ ಕೇಂದ್ರಗಳಿಗೆ ನೋಂದಾಯಿಸಿಕೊಳ್ಳಲು ನೋಟಿಸ್ ನೀಡಲಾಗಿದೆ. ಇಲ್ಲಿಯವರೆಗೆ ಕೇವಲ 12 ಕೇಂದ್ರಗಳು ನೋಂದಾಯಿಸಿಕೊಂಡಿವೆ. ಉಳಿದವುಗಳು ನೋಂದಾಯಿಸಿಕೊಳ್ಳದಿದ್ದರೆ ಅನಧಿಕೃತ ಘೋಷಿಸಿ ಎಂದು ಅಂತಹ ಕೇಂದ್ರಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗುವುದು.
ಎಂ.ಮರಿಸ್ವಾಮಿ, ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)