ಮೇಲುಕೋಟೆ: ಇಲ್ಲಿನ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ಸಮೀಪ ಅನಧಿಕೃತ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿದ ತಹಸೀಲ್ದಾರ್ ಸೌಮ್ಯಾ ಕಟ್ಟಡವನ್ನು ತಕ್ಷಣ ತೆರವುಗೊಳಿಸಲು ಸೂಚಿಸಿದ್ದಾರೆ.
ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟದ ಕಾವಲುಗಾರ ಬಸವೇಗೌಡ ಎಂಬುವರೇ ಸರ್ವೇ ನಂಬರ್ 15ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ವೇಳೆ ರೈತಸಂಘದ ಉಪಾಧ್ಯಕ್ಷ ಈಶ ಮುರಳಿ, ಟಗರು ದಿಲೀಪ್, ಸುಬ್ಬಣ್ಣ, ಗ್ರಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ನೇತೃತ್ವದಲ್ಲಿ ರೈತಸಂಘ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಕ್ರಮ ಕಟ್ಟಡ ತೆರವುಗೊಳಿಸಲು ಒತ್ತಾಯಿಸಿ ತಹಸೀಲ್ದಾರ್‌ಗೆ ದೂರು ಸಲ್ಲಿಸಿದ್ದರು.
ಶಾಸಕರ ಸೂಚನೆ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಅವರೂ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ, ಕಾನೂನು ಉಲ್ಲಂಘಿಸಿ ಬೆಟ್ಟದ ಸುತ್ತಮುತ್ತ ನಿರ್ಮಾಣವಾಗಿರುವ ಎಲ್ಲ ಕಟ್ಟಡಗಳನ್ನೂ ತೆರವು ಮಾಡಿ ಕಾನೂನು ಪಾಲಿಸಲು ಹಿಂಜರಿಯಬೇಡಿ ಎಂದು ಸೂಚಿಸಿದ್ದರು. ಶಾಸಕರ ಸೂಚನೆಯ ಬೆನ್ನಲ್ಲೇ ಮೇಲುಕೋಟೆಗೆ ಬಂದ ತಹಸೀಲ್ದಾರ್ ಸೌಮ್ಯಾ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿ ತಕ್ಷಣ ತೆರವು ಮಾಡದಿದ್ದರೆ ಕಠಿಣ ಕ್ರಮ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಅನಧಿಕೃತ ಕಟ್ಟಡಗಳ ಪಟ್ಟಿಗೆ ಸೂಚನೆ: ಯೋಗಾನರಸಿಂಹಸ್ವಾಮಿ ಬೆಟ್ಟದ ಸುತ್ತ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಪಟ್ಟಿ ಮಾಡಲು ಗ್ರಾಮಾಧಿಕಾರಿ ಮತ್ತು ಪಿಡಿಒಗೆ ತಹಸೀಲ್ದಾರ್ ಸೌಮ್ಯಾ ಸೂಚನೆ ನೀಡಿದ್ದಾರೆ.
ಬೆಟ್ಟದ ಸುತ್ತ ಯಾರೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೂ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ರೈತಸಂಘದ ಉಪಾಧ್ಯಕ್ಷ ಈಶಮುರಳಿ ಬೆಟ್ಟದ ಸುತ್ತ ಸಾಕಷ್ಟು ಅಕ್ರಮ ಕಟ್ಟಡಗಳು ನಿರ್ಮಾಣವಾಗಿವೆ. ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಇಂತಹ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪರೋಕ್ಷವಾಗಿ ಸಹಕರಿಸಿ ಅವರೊಟ್ಟಿಗೆ ಶಾಮೀಲಾಗಿದ್ದಾರೆ. ಸೆಸ್ಕ್ ಇಂಜಿನಿಯರ್ ಲಾಬಿ ನಡೆಸಿ ಗ್ರಾಪಂನಿಂದ ನಿರಪೇಕ್ಷಣಾ ಪತ್ರ ಪಡೆಯದೆ ವಿದ್ಯುತ್ ಸಂಪರ್ಕ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ಕ್ರಮದಿಂದಾಗಿ ನರಸಿಂಹಸ್ವಾಮಿಬೆಟ್ಟದ ಸುತ್ತ ಅಕ್ರಮ ಕಟ್ಟಡಗಳು ನಿರಂತರವಾಗಿ ನಿರ್ಮಾಣವಾಗುತ್ತಿವೆ. ಬೆಟ್ಟದ ಕಾವಲುಗಾರ ಬಸವೇಗೌಡ ನಿರ್ಮಿಸಿದ ಅಕ್ರಮ ಕಟ್ಟಡ ತಡೆಯಲು ಪಿಡಿಒ ಯಾವುದೇ ಕ್ರಮ ಜರುಗಿಸಿಲ್ಲ, ಸೆಸ್ಕ್ ಅಧಿಕಾರಿಗಳು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದಾರೆ. ನಾವು ತರಾಟೆಗೆ ತೆಗೆದುಕೊಂಡ ನಂತರ ಸೆಸ್ಕ್ ಇಇ ಪುಟ್ಟಸ್ವಾಮಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಜಿಲ್ಲಾಡಳಿತ ಎಲ್ಲ ಅಕ್ರಮ ಕಟ್ಟಡಗಳನ್ನೂ ತೆರವುಗೊಳಿಸಿ ಯೋಗಾನರಸಿಂಹಸ್ವಾಮಿ ಬೆಟ್ಟದ ಐತಿಹಾಸಿಕ ಮಹತ್ವ ಮತ್ತು ಪಾವಿತ್ರೃತೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.