ಜಿಲ್ಲೆ

ಅನಧಿಕೃತ ಕಟ್ಟಡ ತಲೆ ಎತ್ತಲು ಬಿಡಲ್ಲ

ಶಾಸಕ ಟಿ.ಬಿ.ಜಯಚಂದ್ರ ಹೇಳಿಕೆ

ಶಿರಾ: ಅನಧಿಕೃತವಾದ ನಿವೇಶನದಲ್ಲಿ ಕಟ್ಟಿರುವ ಕಟ್ಟಡವನ್ನು ಸಕ್ರಮಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಿದ್ದು, ಅನಧಿಕೃತ ಕಟ್ಟಡಗಳು ಇನ್ನು ಮುಂದೆ ತಲೆ ಎತ್ತಲು ಬಿಡುವುದಿಲ್ಲ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್​ ತೀರ್ಪು ದೇಶಕ್ಕೆ ಅನ್ವಯವಾಗುತ್ತದೆ. ಈ ತೀರ್ಪಿನ ಅನುಗುಣವಾಗಿ ದಿನಾಂಕ 01&-03&2025ರಂದು ಕರ್ನಾಟಕ ಸರ್ಕಾರ ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದ ಎಂಟು ನಿರ್ದೇಶನಗಳನ್ನು ನೀಡಿ ಸುತ್ತೋಲೆ ಹೊರಡಿಸಿದೆ. ಅಂತಹ ಕಟ್ಟಡಗಳಿಗೆ ನೀರು, ವಿದ್ಯುತ್​ ಸಂಪರ್ಕ, ಒಳಚರಂಡಿ ಸಂಪರ್ಕ ನೀಡಬಾರದೆಂಬ ನಿರ್ದೇಶನವಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ನಗರಸಭೆ ಸದಸ್ಯರಾದ ಆರ್​.ರಾಮ ಹಾಗೂ ಶಿವಶಂಕರ್​, ಶಿರಾ ನಗರದಲ್ಲಿ ಶೇ. 80ರಷ್ಟು ಡಿಸಿ ಕನ್ವರ್ಷನ್​ ನಿವೇಶನಗಳಿವೆ. ನಾವು ನಿವೇಶನ ಮಾಲೀಕರಿಂದ ಇದುವರೆಗೂ ಕಂದಾಯ ಕಟ್ಟಿಸಿಕೊಂಡು ಬಂದಿದ್ದೇವೆ. ಈಗ ನಾವು ಅನಧಿಕೃತ ಕಟ್ಟಡಕ್ಕೆ ನೀರು, ವಿದ್ಯುತ್​ ನೀಡುವುದಿಲ್ಲ ಎಂದರೆ ನಮ್ಮನ್ನು ಜನ ಸುಮ್ಮನೆ ಬಿಡುತ್ತಾರ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಎಲ್ಲದಕ್ಕೂ ಪರಿಹಾರ ಇರುತ್ತದೆ, ಇದಕ್ಕಾಗಿ ವಿಶೇಷ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ರ್ನಿಣಯ ಸರ್ಕಾರಕ್ಕೆ ಕಳಿಸೋಣ ಎಂದರು.

ನಗರಸಭೆ ಸದಸ್ಯೆ ಪೂಜಾ ಮಾತನಾಡಿ, ನಕಲಿ ಇ&ಸ್ವತ್ತು ಜನರ ಕೈಯಲ್ಲಿ ಹರಿದಾಡುತ್ತಿವೆ. ಇದು ಹೇಗೆ? ಎಂದು ನಕಲಿ ಇ&ಸ್ವತ್ತಿನ ಪ್ರತಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು. ಇದು ಅಪರಾಧ, ಇದರ ಬಗ್ಗೆ ತನಿಖೆ ನಡೆಸಿ ಯಾವ ಅಧಿಕಾರಿ ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ಶಾಸಕರು ಸೂಚಿಸಿದರು. ಕಳೆದ ವರ್ಷ ಸುಂಕ ವಸೂಲಿಯ ಟೆಂಡರ್​ 9 ತಿಂಗಳಿಗೆ ಜಿಎಸ್​ಟಿ ಹೊರತುಪಡಿಸಿ 17,80,000 ರೂ.ಗಳಿಗೆ ಹರಾಜಾಗಿತ್ತು. ಆದರೆ ಈ ವರ್ಷ 12 ತಿಂಗಳಿಗೆ 13, 60000 ರೂ.ಗಳಿಗೆ ಹರಾಜು ಆಗಿದೆ. ವರ್ಷದಿಂದ ವರ್ಷಕ್ಕೆ ಹರಾಜು ಹೆಚ್ಚಿಗೆ ಆಗಬೇಕು. ಆದರೆ ಕಡಿಮೆಯಾಗಿದೆ ಏಕೆ ಎಂದು ಸದಸ್ಯೆ ಸಾನಿಯಾ ಆರ್​ ಖಾದರ್​ ಪ್ರಶ್ನಿಸಿದರು.

ಇದು ಬಹಿರಂಗ ಹರಾಜಾಗಿದ್ದು, ಕಡಿಮೆ ಹರಾಜಾದ ಕಾರಣ ವಿಶೇಷ ಸಭೆ ಕರೆದು ಚರ್ಚಿಸಿ ಈಗಿನ ಬಿಡ್​ದಾರರಿಗೆ 2 ಲಕ್ಷ ಹೆಚ್ಚಿಗೆ ನೀಡಲು ತೀಮಾರ್ನಿಸಲಾಗಿದೆ ನಗರಸಭೆ ಆಯುಕ್ತ ರುದ್ರೇಶ್​ ಹೇಳಿದಾಗ, ಶಾಸಕರು ಮಧ್ಯಪ್ರವೇಶಿಸಿ ಮರು ಟೆಂಡರ್​ ಮಾಡಿ ಎಂದು ಆಯುಕ್ತರಿಗೆ ನಿರ್ದೇಶಿಸಿದರು.

ಬುಕ್ಕಾಪಟ್ಟಣ ಸರ್ಕಲ್​ನಲ್ಲಿ ಸಾರ್ವಜನಿಕ ಶೌಚಗೃಹ ವಿಷಯಕ್ಕೆ ಸದಸ್ಯರಾದ ಸುಶೀಲಾ ವಿರುಪಾಕ್ಷ , ಉಮಾ ವಿಜಯರಾಜ್​ ಎಸ್​.ಎಲ್​.ರಂಗನಾಥ್​ ನಡುವೆ ಮಾತಿನ ಚಕಾಮಕಿ ನಡೆಯಿತು. ನಗರಸಭೆ ಸದಸ್ಯೆ ಉಮಾ ವಿಜಯರಾಜ್​ ಮಾತನಾಡಿ, ಖಾಸಗಿ ಬಸ್​ ನಿಲ್ದಾಣ ಕಾಮಗಾರಿ ವಿಳಂಬ ವಾಗುತ್ತಿದೆ ಏಕೆ? ಎಂದು ಪ್ರಶ್ನಿಸಿದಾಗ ಶುಕ್ರವಾರದಿಂದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಆಯುಕ್ತರು ತಿಳಿಸಿದರು.

ಬಾಕಿ ಹಣ ಯಾವಾಗ ವಸೂಲಿ ಮಾಡುತ್ತೀರಾ?: ನಗರಸಭೆ ಸದಸ್ಯ ರಂಗನಾಥ್​ ಮಾತಾಡಿ, ಮೂರುವರೆ ಕೋಟಿಗೂ ಅಧಿಕ ಅಂಗಡಿ ಮಳಿಗೆ ಬಾಡಿಗೆ ಹಣ ಬಾಕಿ ಇದೆ ಇದನ್ನು ಯಾವಾಗ ವಸೂಲಿ ಮಾಡುತ್ತೀರಾ ಪ್ರತಿ ಸಾರಿ ಏನಾದರೂ ಹೇಳುತ್ತೀರಾ ಎಂದಾಗ, ಈಗಾಗಲೇ 3 ಕೋಟಿ ವಸೂಲಿ ಮಾಡಿದ್ದೇವೆ. ಕ್ರಮೇಣ ಎಲ್ಲವನ್ನು ಹಂತ ಹಂತವಾಗಿ ವಸೂಲಿ ಮಾಡುತ್ತೇವೆ ಎಂದು ನಗರಸಭೆ ಆಯುಕ್ತರು ತಿಳಿಸಿದರು.