ಜಿಲ್ಲೆ

ಅನಧಿಕೃತ ಅಕ್ಕಿ ಸಾಗಾಣಿಕೆ ಪತ್ತೆ ಪ್ರಕರಣ ದಾಖಲು

ಬಾಗಲಕೋಟೆ:  ಸರ್ಕಾರದ ವಿವಿಧ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ದಾಸ್ತಾನು, ಸಾಗಾಣಿಕೆ ಮಾಡುತ್ತಿರುವದನ್ನು ಪತ್ತೆ ಹಚ್ಚಿ ಜಪ್ತ ಮಾಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿಯನ್ನು ಅನಧಿಕೃತವಾಗಿ ದಾಸ್ತಾನು/ಸಾಗಾಣಿಕೆ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಅಗತ್ಯ ವಸ್ತುಗಳ ಕಾಯ್ದೆ-1955ರಡಿ ಪ್ರಕರಣಗಳನ್ನು ದಾಖಲಿಸುವ ಕಾರ್ಯ ನಿರಂತವಾಗಿ ನಡೆದಿರುತ್ತದೆ. ಅದರಂತೆ ಜುಲೈ 8 ರಂದು ರಾತ್ರಿ ಸಾರ್ವಜನಿಕರ ದೂರವಾಣಿ ಕರೆಯ ಮೇರೆಗೆ ಆಹಾರ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ದಾಳಿ ಮಾಡಿ, ಸರ್ಕಾರದ ವಿವಿಧ ಯೋಜನೆಯ ಅಕ್ಕಿಯನ್ನು ಅನಧಿಕೃತವಾಗಿ ದಾಸ್ತಾನು/ಸಾಗಾಣಿಕೆ ಮಾಡುತ್ತಿರುವದನ್ನು ಪತ್ತೆ ಹಚ್ಚಿ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ಸಮೀಪದ ಬುದ್ಧಿ ಗ್ರಾಮದಲ್ಲಿ ಸುಮಾರು 150.00 ಕ್ವಿಂ ಅಕ್ಕಿ ಹಾಗೂ ಒಂದು ವಾಹನವನ್ನು ಹಾಗೂ ದಿನಾಂಕ:09-7-2025 ರಂದು ಮುಧೋಳ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ 14.75 ಕ್ವಿಂ ಅಕ್ಕಿಯನ್ನು ಜಪ್ತ ಮಾಡಿ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪೊಲೀಸ್ ಪ್ರಕರಣಗಳನ್ನು ಆಹಾರ ಇಲಾಖೆ ಅಧಿಕಾರಿಗಳು ದಾಖಲಿಸಿರುತ್ತಾರೆ.

2024-25ನೇ ಸಾಲಿನಲ್ಲಿ 16 ಪ್ರಕರಣಗಳನ್ನು ದಾಖಲಿಸಿ 1020.32 ಕ್ವಿಂ ಅಕ್ಕಿ ಹಾಗೂ 12 ವಾಹನಗಳನ್ನು ಜಪ್ತಿ ಮಾಡಿದ್ದು, 29 ಜನರನ್ನು ಬಂಧಿಸಲಾಗಿರುತ್ತದೆ. ಅದೇ ರೀತಿ 2025-26ನೇ ಸಾಲಿನಲ್ಲಿ ಅಂದರೆ ಏಪ್ರೀಲ್-2025 ರಿಂದ ಈವರೆಗೆ 12 ಪ್ರಕರಣಗಳನ್ನು ದಾಖಲಿಸಿ 391.02 ಕ್ವಿಂ ಅಕ್ಕಿ ಹಾಗೂ 06 ವಾಹನಗಳನ್ನು ಜಪ್ತ ಮಾಡಿ 20 ಜನರನ್ನು ಬಂಧಿಸಿ, ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಸದರ ಪ್ರಕರಣಗಳು ಆಯಾ ತಾಲೂಕುಗಳ ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುತ್ತವೆ.

ಸರ್ಕಾರದ ವಿವಿಧ ಯೋಜನೆಯ ಆಹಾರಧಾನ್ಯ ದುರ್ಬಳಕೆ ಕುರಿತು ಏನಾದರೂ ದೂರುಗಳಿದ್ದಲ್ಲಿ ಪೋಲೀಸ್ ಇಲಾಖೆಯ ಸಹಾಯವಾಣಿ : 112, 9480803900 55 ಆಹಾರ ಇಲಾಖೆಯ ಸಹಾಯವಾಣಿ 1967 ದೂರವಾಣಿ 08354-235094 ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಇಲ್ಲವೇ ಸಂಬಂಧಿಸಿದ ತಾಲೂಕಿನ ಸಲ್ಲಿಸಬಹುದಾಗಿದೆ. ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕರಿಗೆ ದೂರು ನೀಡಬಹುದಾಗಿದೆ ಎಂದು ಆಹಾರ ಇಲಾಖೆಯ ಜ‌ಂಟಿ ನಿರ್ದೇಶಕರು ತಿಳಿಸಿದ್ದಾರೆ.