ಮದ್ದೂರು: ರೈತ ಸಂಘ ನಿರಂತರವಾಗಿ ರೈತರ ಪರವಾದ ಚಳಿವಳಿ ಮಾಡಿಕೊಂಡು ಸರ್ಕಾರದ ಗಮನ ಸೆಳೆಯುತ್ತಿದೆ ಎಂದು ತಾಲೂಕು ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿಯ ಮಾದನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ರೈತ ಸಂಘದ ಗ್ರಾಮ ಘಟಕದ ಉದ್ಘಾಟಿಸಿ ಮಾತನಾಡಿದರು. ರೈತರ ಹಲವಾರು ಸಮಸ್ಯೆಗಳ ವಿರುದ್ಧ ಸ್ಥಳಿಯ ಮತ್ತು ರಾಜ್ಯಮಟ್ಟದಲ್ಲಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದು ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ ಹೆಗ್ಗಳಿಕೆ ರೈತ ಸಂಘಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಪ್ರವಾಹ ಬಂದ ಸಂದರ್ಭದಲ್ಲಿ ನಾಶವಾದ ಬೆಳೆಗಳಿಗೆ ಸೂಕ್ತ ಪರಿಹಾರ, ಬೆಳೆದ ಉತ್ಪನ್ನಗಳನ್ನು ರಕ್ಷಣೆ ಮಾಡಲು ಶಿಥಿಲೀಕರಣ ವ್ಯವಸ್ಥೆ ಮಾಡುವುದು ಸೇರಿದಂತೆ ರೈತರ ಹಿತದೃಷ್ಟಿಯಿಂದ ಸರ್ಕಾರಗಳು ಯೋಜನೆಗಳನ್ನು ರೂಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಪ್ರಸನ್ನಗೌಡ ಮಾತನಾಡಿ, ರೈತರು ಸಾಂಘಿಕ ಹೋರಾಟ ಮಾಡುವ ಮೂಲಕ ಸರ್ಕಾರದದಿಂದ ಸಿಗುವ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ರೈತರು ಬೇಸಾಯ ಮಾಡದಿದ್ದರೆ ಪ್ರಪಂಚದ ಯಾವುದೇ ಜೀವರಾಶಿಗಳಿಗೆ ಆಹಾರ ಸಿಗದೆ ಪರಿತಪ್ಪಿಸಬೇಕಾಗುತ್ತದೆ. ಇದನ್ನು ಸರ್ಕಾರಗಳು ಮನಗಂಡು ಕೃಷಿ ವಲಯಕ್ಕೆ ವಿಶೇಷ ಗಮನ ನೀಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷರಾದ ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಜಿಲ್ಲಾ ಖಜಾಂಚಿ ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿನೋದ್‌ಬಾಬು, ತಾಲೂಕು ಖಜಾಂಚಿ ಸಿದ್ದೇಗೌಡ, ಗ್ರಾಮ ಘಟಕದ ಅಧ್ಯಕ್ಷರಾದ ದೇವರಾಜು, ಗ್ರಾಪಂ ಸದಸ್ಯೆ ಪೂರ್ಣಿಮಾ, ನಿವೃತ್ತ ಶಾಲಾ ಶಿಕ್ಷಕರಾದ ಪುಟ್ಟಸ್ವಾಮಿ, ರಾಮಯ್ಯ, ರೈತಸಂಘಟನೆ ಕಾರ್ಯಕರ್ತರು, ಮಹಿಳೆಯರು, ಮಾದನಾಯಕನಹಳ್ಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.