ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲಾಕ್ಡೌನ್ ಮುಂದುವರಿಸುವುದಾಗಿ ಜಿಲ್ಲಾಡಳಿತ ನಿರ್ಧಾರ ಕೈಗೊಂಡ ದಿನವೇ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅನಗತ್ಯವಾಗಿ ತಿರುಗುವ ವಾಹನಗಳ ಸಂಖ್ಯೆ ಹೆಚ್ಚಿದೆ.
ಬುಧವಾರ ನಗರದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಗಮನಿಸಿದರೆ ಹುಬ್ಬಳ್ಳಿಯಲ್ಲಿ ಲಾಕ್ಡೌನ್ ಹಿಂಪಡೆದಿರಬಹುದೇ ಎಂಬ ಶಂಕೆ ಕಾಡುವಂತಿತ್ತು.
ಬಸವ ವನ, ಚನ್ನಮ್ಮ ವೃತ್ತ ಹಾಗೂ ಸವೋದಯ ವೃತ್ತಗಳಲ್ಲಿ ಬೆಳಗ್ಗೆ ಹಾಗೂ ಸಂಜೆಯಷ್ಟೇ ನೆಪಮಾತ್ರಕ್ಕೆ ಎನ್ನುವಂತೆ ಪೊಲೀಸರು ವಾಹನಗಳನ್ನು ತಡೆದು, ವಿಚಾರಿಸುವುದು ಕಳೆದ ಕೆಲ ದಿನಗಳಿಂದ ನಡೆಯುತ್ತ ಬಂದಿದೆ. ಇನ್ನುಳಿದ ಸಮಯದಲ್ಲಿ ಮನಬಂದಂತೆ ತಿರುಗುವ ವಾಹನಗಳನ್ನು ತಡೆಯುವವರೇ ಇಲ್ಲದಂತಾಗಿದೆ.
ಇದನ್ನರಿತ ಕೆಲ ಕಿಡಿಗೇಡಿಗಳು ಮಧ್ಯಾಹ್ನ 12 ರ ನಂತರ ಒಂದು ಬೈಕ್ನಲ್ಲಿ ಮೂವರು ಕುಳಿತು ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ತಿರುಗುತ್ತಿರುತ್ತಾರೆ. ಬೆಳಗ್ಗೆ ಮತ್ತು ಸಂಜೆಯ ಸಮಯ ಹೊರತುಪಡಿಸಿದರೆ ಬೈಕ್, ಕಾರು ಹಾಗೂ ಆಟೊಗಳು ಮನಬಂದಂತೆ ಸಂಚರಿಸುತ್ತಿದ್ದವು.
ಇನ್ನೂ ಸೀಲ್ಡೌನ್ ಪ್ರದೇಶವಾದ ಕೇಶ್ವಾಪುರದ ಆಜಾದ್ ಕಾಲನಿ ಸುತ್ತಲೂ ಜನರು ಹಾಗೂ ವಾಹನಗಳು ಹೊರಬರದಂತೆ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಆದರೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸಾರ್ವಜನಿಕರು ಬ್ಯಾರಿಕೇಡ್ ಒಳಗಿನಿಂದ ನುಸುಳಿಕೊಂಡು ಬರುತ್ತಿದ್ದರು.