ಹಾವೇರಿ: ಜನರು ವಿನಾಕಾರಣ ಸಂಚರಿಸುವುದನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಿ, ಆದರೆ, ಜನರ ಮೇಲೆ ಲಾಠಿ ಬೀಸಬೇಡಿ. ಬದಲಿಗೆ ಬೈಕ್ಗಳನ್ನು ವಶಕ್ಕೆ ಪಡೆಯಿರಿ, ದಂಡ ಹಾಕಿ...!
ಹೀಗೆಂದು ಶಾಸಕ ನೆಹರು ಓಲೇಕಾರ ತಾಲೂಕಿನ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಸಭಾಭವನದಲ್ಲಿ ಸೋಮವಾರ ಕರೊನಾ ನಿಯಂತ್ರಣ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸುವವರಿಗೆ ಲಾಠಿ ಬದಲು ಬೇರೆ ರೀತಿಯ ಕ್ರಮಗಳನ್ನು ಕೈಗೊಳ್ಳಿ ಎಂದರು.
ತರಕಾರಿ ಹರಾಜು ಮಾರುಕಟ್ಟೆ ಸೇರಿ ವಿವಿಧೆಡೆ ಜನದಟ್ಟಣೆಯಾಗದಂತೆ ಕಠಿಣ ಕ್ರಮಕೈಗೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಿಗಾವಹಿಸಿ, ಹೋಮ್ ಕ್ವಾರಂಟೈನಲ್ಲಿರುವವರು ಮನೆಯಿಂದ ಹೊರಗೆ ಬರದಂತೆ ಎಚ್ಚರ ವಹಿಸಿ. ನಗರ ಸ್ವಚ್ಛತೆ ಹಾಗೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಿ ಎಂದು ಪೌರಾಯುಕ್ತ ಬಸವರಾಜ ಜಿದ್ದಿಯವರಿಗೆ ಸೂಚಿಸಿದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಅಗತ್ಯ ವಸ್ತುಗಳ ಸಾಗಾಣಿಕೆಗೆ ಅನುಮತಿ ನೀಡುವ ವ್ಯವಸ್ಥೆ ಸರಳೀಕರಿಸಿ. ರೇಷ್ಮೆ ಗೂಡು ಸಾಗಾಣಿಕೆ, ಹಣ್ಣು, ತರಕಾರಿ, ಸಾಗಾಣಿಕೆಗೆ ತೊಂದರೆಯಾಗಬಾರದು ಎಂದರು.
ತಹಸೀಲ್ದಾರ್ ಶಂಕರ ಜಿ.ಎಸ್., ಡಿಎಸ್ಪಿ ವಿಜಯಕುಮಾರ ಸಂತೋಷ, ತಾಪಂ ಇಒ ಡಿ.ಸಿ. ಬಸವರಾಜ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಪೌರಾಯುಕ್ತರು ನೀಡುವ ಸೂಚನೆ ಪಾಲಿಸದೇ ಇರುವ ಕುರಿತು ಶಾಸಕ ನೆಹರು ಓಲೇಕಾರ, ಪರಿಸರ ಇಂಜಿನಿಯರ್ ಚಂದ್ರಕಾಂತ ಗುಡ್ಡಣ್ಣನವರ, ಇಇ ಎಸ್.ಎಸ್. ರಾಯ್ಕರ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಡಿಸಿ ಸಭೆ ಕರೆದರೆ ಬರೊಲ್ಲಾ ಅಂತಿಯಂತಾ, ಬೇಕಾದರೆ ಸಸ್ಪೆಂಡ್ ಮಾಡಿಕೊಳ್ಳಿ ಅಂದಿಯಂತಾ, ನಿಮ್ಮ ಕಮಿಷನರ್ ಹೆಡ್ಡಾ ಅದಾನಾ, ನಿನ್ನ ಸುಮ್ನಾ ಬಿಟ್ಟಾನಾ, ಇನ್ಮುಂದೆ ಹುಷಾರಿಯಿಂದ ಕೆಲಸಾ ಮಾಡು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಇ ರಾಯ್ಕರ ಅವರೇ, ‘ಪೈಪ್ಲೈನ್ ದುರಸ್ತಿ ಮಾಡಿಸಾಕ ನಿಂಗ್ ಎಷ್ಟು ದಿನಾ ಬೇಕು. ನೆಪ ಹೇಳಕೊಂತ ಇರಬೇಡಿ’ ಎಂದು ತಾಕೀತು ಮಾಡಿದರು.
ಪರಿಸ್ಥಿತಿಯ ಲಾಭ ಪಡೆದು ಕೆಲವರು ದಿನಸಿ ಹಾಗೂ ತರಕಾರಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಬರುತ್ತಿವೆ. ಮಂಗಳವಾರದಿಂದ ತರಕಾರಿ, ದಿನಸಿ ಅಂಗಡಿಗಳಲ್ಲಿ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು. ಒಂದೊಮ್ಮೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ಕಂಡುಬಂದರೆ ಅವರ ಪರವಾನಗಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿ. ತರಕಾರಿಯನ್ನು ಹೋಲ್ಸೇಲ್ ಮಾರುಕಟ್ಟೆಗಿಂತ 5 ರೂ.ಗಳಷ್ಟು ಹೆಚ್ಚಿನ ದರಕ್ಕೆ ಮಾತ್ರ ಮಾರಬೇಕು. ತಳ್ಳುವ ಗಾಡಿಯಲ್ಲಿಯೂ ದರಪಟ್ಟಿ ಹಾಕಲು ಸೂಚಿಸಿ ಎಂದು ಶಾಸಕ ನೆಹರು ಓಲೇಕಾರ ಅಧಿಕಾರಿಗಳಿಗೆ ಸೂಚಿಸಿದರು.