ಹುಬ್ಬಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ತಡೆದ ಗ್ರಾಮೀಣ ಪೊಲೀಸರು, ಶನಿವಾರ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಬ್ಯಾಹಟ್ಟಿ, ಅದರಗುಂಚಿ, ಕೊಟಗೊಂಡಹುಣಸಿ ಸೇರಿ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಕಾರ್ಯಾಚರಣೆ ನಡೆಸಿದ ಪೊಲೀಸರು 20 ಬೈಕ್ ವಶಕ್ಕೆ ಪಡೆದಿದ್ದಾರೆ.
ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಜಾಕ್ಸನ್ ಡಿಸೋಜಾ ಹಾಗೂ ಸಿಬ್ಬಂದಿಯವರು ಗುಂಪು ಗುಂಪಾಗಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ಜಪ್ತಿ ಮಾಡಿದ್ದಾರೆ.
ಹೋಟೆಲ್ ಸೀಜ್: ಕರೊನಾ ನಿಷೇಧಾಜ್ಞೆ ಉಲ್ಲಂಘಿಸಿ ಹೋಟೆಲ್ ತೆರೆದು ಗ್ರಾಹಕರಿಗೆ ಆಹಾರ ಪದಾರ್ಥ ವಿತರಿಸುತ್ತಿದ್ದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಮಂಜುನಾಥ ಶಿವಯೋಗಪ್ಪ ಹಸಬಿ ಅವರ ಹೋಟೆಲ್ ಅನ್ನು ಶನಿವಾರ ಸೀಜ್ ಮಾಡಲಾಗಿದೆ. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಗೋಳ ಠಾಣೆ ವ್ಯಾಪ್ತಿಯಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದ 50 ಬೈಕ್, 1 ಕಾರ್ ಸೀಜ್ ಮಾಡಿ ಚಾಲಕರಿಂದ 36 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಗುಡಗೇರಿ ಠಾಣೆ ವ್ಯಾಪ್ತಿಯಲ್ಲಿ 30 ಬೈಕ್, 1 ಕಾರ್ ಸೀಜ್ ಮಾಡಿ ಚಾಲಕರಿಗೆ 32,500 ರೂ. ದಂಡ ವಿಧಿಸಲಾಗಿದೆ.
ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ 90 ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿ, ಸವಾರರಿಂದ 58,500 ರೂ. ದಂಡ ಸಂಗ್ರಹಿಸಿದ್ದಾರೆ.