ಜಿಲ್ಲೆ

ಅಧ್ಯಾಪಕರು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಿ: ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಸ್.ಆರ್.ರಾವ್

ಮೈಸೂರು: ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗುವ ಮೂಲಕ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಇದರಿಂದ ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳುವ ಜತೆಗೆ ವಿದ್ಯಾರ್ಥಿಗಳಿಗೂ ಉತ್ತಮ ಬೋಧನೆ ಮಾಡಲು ನೆರವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಸ್.ಆರ್.ರಾವ್ ಅಭಿಪ್ರಾಯಪಟ್ಟರು.
ದಿ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್‌ಐಇ)ನ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಅಧ್ಯಾಪಕರಿಗಾಗಿ ಸೋಮವಾರದಿಂದ ಐದು ದಿನಗಳ ಕಾಲ ಆಯೋಜಿಸಿರುವ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸಂಶೋಧನಾ ಒಳನೋಟ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜತೆಗೆ ಅಧ್ಯಾಪಕರೂ ಕಲಿಕೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಬೇಕು. ಸಂಶೋಧನೆಗಳತ್ತ ಹೆಚ್ಚಿನ ಗಮನ ನೀಡಬೇಕು. ಇದರಿಂದ ಅಧ್ಯಾಪಕರಲ್ಲಿಯೂ ಆಳವಾದ ಜ್ಞಾನ ಬೆಳೆಯಲು, ಉತ್ತಮವಾಗಿ ಬೋಧನೆ ಮಾಡಲು ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಕಲಿಸಲು ಅಧ್ಯಾಪಕರು ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಅಗತ್ಯವಾಗಿದೆ. ಸಂಶೋಧನೆಯು ಅಧ್ಯಾಪಕರಿಗೆ ಲಭ್ಯವಿರುವ ಸುಲಭ ಮಾರ್ಗವಾಗಿದ್ದು, ಇದರಿಂದ ತಮ್ಮನ್ನು ತಾವು ನವೀಕರಿಸಿಕೊಳ್ಳಲು ಶಕ್ತಗೊಳಿಸುತ್ತದೆ ಎಂದರು.
ಸಂಶೋಧನೆಯು ಯಾವುದೇ ಸಮಸ್ಯೆಯನ್ನು ವ್ಯವಸ್ಥಿತವಾಗಿ ಪರಿಹರಿಸಲು ಸಹಾಯ ಮಾಡುವ ಒಂದು ಕ್ಷೇತ್ರವಾಗಿದೆ. ಅಧ್ಯಾಪಕರು ಶಿಕ್ಷಣಕ್ಕೆ ಸಂಬಂಧಿಸಿದ ಹಾಗೂ ಸಂಶೋಧನಾ ಪ್ರಕಟಣೆಯನ್ನು ಹೊರತರುವ ಮೂಲಕ ಜ್ಞಾನವನ್ನು ಇತರರಿಗೂ ಹಂಚುವುದು ಅತ್ಯಂತ ಅವಶ್ಯಕ. ತಮ್ಮ ಹೆಸರಿನಲ್ಲಿ ಹಲವಾರು ಪ್ರಕಟಣೆಗಳನ್ನು ಹೊಂದಿದ್ದರೂ ಕೆಲವು ವ್ಯಕ್ತಿಗಳು ತಮ್ಮ ಭಾಷಣದಲ್ಲಿ ತಪ್ಪಾದ ಮಾಹಿತಿ ನೀಡುತ್ತಾರೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ಪ್ರಕಟಣೆಗಳು ಗುಣಮಟ್ಟ ಮತ್ತು ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಕಲಿಕೆ ಮತ್ತು ತಿಳಿವಳಿಕೆಗೆ ಆದ್ಯತೆ ನೀಡಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಶೋಧನಾ ಪ್ರಕಟಣೆಗಳು ಕೇವಲ ಪದವಿ ಪಡೆಯುವ ಸಲುವಾಗಿ ಸೀಮಿತವಾಗುವಂತಿವೆ. ಆದ್ದರಿಂದ ಗುಣಮಟ್ಟದ ಸಂಶೋಧನೆ ಹೊರಬರಲಿ ಎಂದು ಸಲಹೆ ನೀಡಿದರು.
ಎನ್‌ಐಇ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಎಸ್.ಗಣೇಶ್‌ಪ್ರಸಾದ್, ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಯುಸೆಫ್ ಜಾವೇದ್, ಪ್ರಾಧ್ಯಾಪಕ ಡಾ.ಕೆ.ಸಿ.ಮಂಜುನಾಥ್ ಇತರರು ಇದ್ದರು.