ಜಿಲ್ಲೆ

ಅಧ್ಯಾಪಕರು ನಿರಂತರವಾಗಿ ಕ್ರಿಯಾಶೀಲರಾಗಿ

ಮೈಸೂರು: ಅಧ್ಯಾಪಕರು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿ ಕ್ರಿಯಾಶೀಲರಾಗಿರಬೇಕು. ಆಗ ಮಾತ್ರ ಅತ್ಯುತ್ತಮ ಅಧ್ಯಾಪಕರೆನಿಸಿಕೊಳ್ಳಲು ಸಾಧ್ಯ ಎಂದು ಜ್ಞಾನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ.ಪಾಂಡುರಂಗ ವಿಠಲ ಹೇಳಿದರು.


ವಿದ್ವಾನ್ ಸುರೇಶ್ ಅಭಿಮಾನಿಗಳ ಬಳಗ, ಮಹಾರತ್ನ ಟ್ರಸ್ಟ್ ಸಹಯೋಗದಲ್ಲಿ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಡಿ.ಬನುಮಯ್ಯ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಸುರೇಶ್ ಅವರಿಗೆ ಅಭಿನಂದನೆ, ಕಾವ್ಯಸಿರಿ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರಸ್ತುತ ದಿನಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಹೇಳಬೇಕು. ಇದುವೇ ಕಲಿಕಾ ಅಭ್ಯಾಸದಲ್ಲಿ ತೊಡಗಿರುವ ಒಬ್ಬ ಮಾದರಿ ಶಿಕ್ಷಕನ ಕರ್ತವ್ಯವಾಗುತ್ತದೆ ಎಂದರು.


ಆರಾಧ್ಯ ಮಹಾಸಭಾ ಅಧ್ಯಕ್ಷ ಪಿ.ನಾಗಭೂಷಣ ಆರಾಧ್ಯ ಮಾತನಾಡಿ, ಆಧುನಿಕ ಕಾವ್ಯ ಪ್ರಪಂಚದಲ್ಲಿ ಛಂದಸ್ಸಿಗಿಂತಲೂ ಭಾವ ಮತ್ತು ಲಯಬದ್ಧ ಸಾಲುಗಳು ಹೆಚ್ಚು ಪ್ರಚಲಿತವಾಗುತ್ತಿದೆ. ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಗದ್ಯಪದ್ಯಗಳು ಇಂದಿನ ಭಾವ ಪ್ರಪಂಚವನ್ನು ಆಳುತ್ತಿವೆ. ಕವಿಯಾದವನಿಗೆ ಸಮಾನ ಮನಸ್ಕರ ನಡೆ, ನುಡಿ, ಹಿನ್ನೆಲೆ, ಸಂಸ್ಕೃತಿ ಗೊತ್ತಿರಬೇಕು. ಮನುಷ್ಯತ್ವದ ಸೊಬಗಿನ ಸ್ನೇಹ ಭಾವ ಕಾವ್ಯಸಿರಿ ಕವನ ಸಂಕಲನದಲ್ಲಿ ಅಡಗಿದೆ ಎಂದು ಅಭಿಪ್ರಾಯಿಸಿದರು.
ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಮಹೇಶ್ ಕುಮಾರ್, ವಿದ್ವಾನ್ ವೆಂಕೋಬರಾವ್, ಪ್ರಾಂಶುಪಾಲ ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.