ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಗುರುಕುಮಾರ ಶಿವಯೋಗಿಗಳ 154ನೇ ಜಯಂತಿ ನಿಮಿತ್ತ ದೇವರಿಗೆ ಅಭಿಷೇಕ ನೆರವೇರಿಸಿದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾರ್ಚಾಯರು ಮಾತನಾಡಿದರು. ಗುಡೂರ ಅನ್ನ ದಾನೇಶ್ವರ ಶಾಸ್ತ್ರಿಗಳು, ಮುತ್ತೂರ ವೇದಮೂರ್ತಿ ಗಿರೀಶ ಶ್ರೀ, ಮುತ್ತಯ್ಯ ಶ್ರೀ, ಹಿಪ್ಪರಗಿ ಮಹಾಂತಯ್ಯ ಸ್ವಾಮೀಜಿ ಮತ್ತಿತರರು ಇದ್ದರು. 
ಜಿಲ್ಲೆ

ಅಧ್ಯಾತ್ಮದಲ್ಲಿ ಭಾರತ ಶ್ರೀಮಂತ ದೇಶ

ಅರಟಾಳ : ಭಾರತ ಸುಂದರ ಹಾಗೂ ಅಧ್ಯಾತ್ಮದಲ್ಲಿ ಶ್ರೀಮಂತ ದೇಶ. ಇಲ್ಲಿನ ಸಂತರು, ಶರಣರು, ಮಹಾತ್ಮರು ಅಧ್ಯಾತ್ಮದ ಮಹತ್ವ ತಿಳಿಸಿದರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾರ್ಚಾಯರು ಹೇಳಿದರು.

ಗ್ರಾಮದ ಹೊರವಲಯದಲ್ಲಿರುವ ಗುಡ್ಡದ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ಗುರುಕುಮಾರ ಶಿವಯೋಗಿಗಳ 154ನೇ ಜಯಂತಿ ನಿಮಿತ್ತ ದೇವರಿಗೆ ಅಭಿಷೇಕ ನೆರವೇರಿಸಿ ಮಾತನಾಡಿದರು. ಜೀವನದಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ನಮ್ಮ ಮನೆ ದೇವರು, ಮನೆ ಗುರುವಿನ ಜತೆಗೆ ನಮ್ಮ ಸಂಪರ್ಕವಿರಬೇಕು. ಅದು ಯಾವತ್ತೂ ಕಡಿಮೆಯಾಗಬಾರದು. ಪ್ರತಿ ವರ್ಷವೂ ನಾವು ಶಿವಲಿಂಗೇಶ್ವರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತೇವೆ. ಅದನ್ನು ಯಾವ ವರ್ಷವೂ ತಪ್ಪಿಸಿಲ್ಲ. ಹಾಗೆ ಎಲ್ಲರೂ ತಮ್ಮ ಗುರುವಿನ ದರ್ಶನ ಪಡೆಯಬೇಕು. ಮಲ್ಲಿಕಾರ್ಜುನ ಇರುವುದು ಶ್ರೀಶೈಲ ಗುಡ್ಡದಲ್ಲಿ, ಶಿವಲಿಂಗೇಶ್ವರರು ಇರುವುದು ಗುಡ್ಡದಲ್ಲಿ. ಇವು ಶ್ರೇಷ್ಠವಾದ ಪುಣ್ಯಕ್ಷೇತ್ರಗಳು ಎಂದರು. ನಾವು ನೋಡಬೇಕು ಆದರೆ, ಕಣ್ಣು ಹೊಲಸಾಗಬಾರದು. ಕೇಳಬೇಕು ಆದರೆ, ಕಿವಿ ಹೊಲಸಾಗಬಾರದು. ಮಾತನಾಡಬೇಕು ಆದರೆ, ಮನಸ್ಸು ಹೊಲಸಾಗಬಾರದು. ಈ ಪ್ರಕಾರಗಳಲ್ಲಿ ಜೀವನದಲ್ಲಿ ಬದುಕಬೇಕು. ಸಂಪತ್ತು ಎಂದರೆ ಹಣ, ಐಶ್ವರ್ಯವಲ್ಲ. ಸದ್ಗುರುವಿನ ದರ್ಶನ ಭಾಗ್ಯವೇ ಸಿರಿ ಸಂಪತ್ತು. ಜನರು ದುಶ್ಚಟ ತ್ಯಜಿಸಿ ಉತ್ತಮ ಮಾನವರಾಗಬೇಕು ಎಂದರು.

ಮಾಂಜರಿಯ ಗುರುಶಾಂತ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು. ಸದ್ಗುರುವಿನ ದರ್ಶನ ಬದುಕಿನ ಅಡೆ-ತಡೆ ದೂರವಾಗಿಸುತ್ತದೆ ಎಂದರು. ಸತಗೊಂಡ ನೇಮಗೌಡ, ಲಕ್ಷ್ಮೀಬಾಯಿ ನೇಮಗೌಡ, ಗುರುಮೂರ್ತಯ್ಯ ಹಿರೇಮಠ, ಸಾವಳಗಿಯ ಶಿವಾನಂದ ಶ್ರೀ, ಸೋಮಯ್ಯ ಹಿರೇಮಠ, ತಾಪಂ ಸದಸ್ಯ ಶಿವಪ್ಪ ಹಟ್ಟಿ, ರಾಮಪ್ಪ ಪೂಜಾರಿ, ಮಾಳಪ್ಪ ಕಾಂಬಳೆ, ನಿಂಗಪ್ಪ ಮಾಳಿ, ಅರಟಾಳ, ಹಾಲಳ್ಳಿ, ಸಾವಳಗಿ, ತುಂಗಳ ಗ್ರಾಮಗಳ ಭಕ್ತರು ಇದ್ದರು.