ಜಿಲ್ಲೆ

ಅಧ್ಯಾತ್ಮ ಜೀವನದಿಂದ ಮಾತ್ರ ಜೀವನ ಮೌಲ್ಯದ ಆನಂದ: ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ

ಮೈಸೂರು: ಅಧ್ಯಾತ್ಮ ಜೀವನದಿಂದ ಮಾತ್ರ ಉನ್ನತ ಶ್ರೇಯಸ್ಸು, ಶಾಂತಿ ನೆಮ್ಮದಿ ಹಾಗೂ ಜೀವನ ಮೌಲ್ಯವನ್ನು ಆನಂದಿಸಬಹುದು ಎಂದು ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಶಿವರಾತ್ರಿ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹುಣಸೂರು ರಸ್ತೆಯ ಭಾರತೀಯ ವಿದ್ಯಾಭವನದ ಬಳಿ ಆಯೋಜಿಸಿರುವ ‘ಜ್ಞಾನ ವಿಜ್ಞಾನ ಮಹೋತ್ಸವ’ ಕಾರ್ಯಕ್ರಮದಲ್ಲಿ ಶನಿವಾರ ಭಾರತ ಯುವಕರು ಆಧ್ಯಾತ್ಮ ಮತ್ತು ರಾಷ್ಟ್ರೀಯ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪುಣ್ಯಭೂಮಿ ಭಾರತ ಅಧ್ಯಾತ್ಮದ ಸ್ವರ್ಗವಾಗಿದ್ದು, ಸಂಸ್ಕೃತಿ ಪರಂಪರೆ ಹಾಗೂ ಯೋಗದ ವಿಶ್ವ ಶ್ರೇಷ್ಠ ಮೌಲ್ಯಗಳ ಆಗರವಾಗಿದೆ. ಆದರೆ ಜ್ಞಾನವನ್ನು ಜಗತ್ತಿಗೆ ನೀಡಿದ ಮಹಾನ್ ದೇಶದ ಇತಿಹಾಸವನ್ನು ಯುವಕರಿಗೆ, ವಿದ್ಯಾರ್ಥಿಗಳಲ್ಲಿ ತಲುಪಿಸುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸಂಘಟನೆಗಳು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ಅಧ್ಯಾತ್ಮ ಮತ್ತು ಮೌಲ್ಯಗಳ ಅರಿವನ್ನು ಉಂಟು ಮಾಡುವುದಕ್ಕೆ ವಿಶೇಷ ಗಮನ ಹರಿಸಿರುವುದು ಸಂತಸದ ಸಂಗತಿ ಎಂದರು.

ದೇಶದ ಜನಸಂಖ್ಯೆಯ ಶೇಕಡ 50ಕ್ಕೂ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ರಾಷ್ಟ್ರವಾಗಿರುವ ಭಾರತದಲ್ಲಿ ಉತ್ಪಾದಕ ಶಕ್ತಿ ಹೆಚ್ಚಿದೆ. ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ, ಕರ್ಮಶಕ್ತಿ ಮೂಲಕ ಇಡೀ ವಿಶ್ವ ವ್ಯಾಪಿಯಾಗಿರುವ ಭಾರತದ ಸಮುದಾಯಕ್ಕೆ ವಿಶೇಷವಾದ ಗೌರವ ನಂಬಿಕೆ ಹೊಂದಿದೆ ಎಂದು ಬಣ್ಣಿಸಿದರು.

ಜಗತ್ತಿಗೆ ಮತ್ತೊಮ್ಮೆ ಜಗದ್ಗುರುವಾಗಲು ಭಾರತ ಹೊಂದಿರುವ ಅಧ್ಯಾತ್ಮ ಶಕ್ತಿಯ ಪ್ರಭಾವ ನಮ್ಮ ಯುವ ಪೀಳಿಗೆಯಲ್ಲಿ ಅಪಾರವಾಗಿದೆ .ಯುವಕರು ರಾಷ್ಟ್ರೀಯ ಮೌಲ್ಯಗಳಾದ ಸೇವೆ ಮತ್ತು ತ್ಯಾಗದ ಮೂಲಕ ತಮ್ಮ ಧ್ಯಾನದ ಸದ್ಬಳಕೆಯ ಮೂಲಕ ರಾಷ್ಟ್ರವನ್ನು ಪರೋಕ್ಷವಾಗಿ ಎಲ್ಲ ಕ್ಷೇತ್ರಗಳಲ್ಲಿ ಇಂದು ವಿರಾಜಮಾನವಾಗಿ ಆಳಲ್ಪಡುತ್ತಿದೆ ಎಂದರು.

ಜಗತ್ತಿನ ವಿಜ್ಞಾನ, ತಂತ್ರಜ್ಞಾನ ಬಾಹ್ಯಾಕಾಶ ,ಕೃಷಿ, ವಿಜ್ಞಾನ ವೈದ್ಯಕೀಯ, ನೀರಾವರಿ, ಆಹಾರ ಉತ್ಪಾದನೆ, ಬೌದ್ಧಿಕ ಶಕ್ತಿ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದಕ್ಕೆ ಭಾರತೀಯರು ಹೊಂದಿರುವ ಜ್ಞಾನಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ರಹಸ್ಯವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಯುವಕರು ಅಧ್ಯಾತ್ಮವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು, ಅಧ್ಯಾತ್ಮವೆಂದರೆ ಸನ್ಯಾಸಿಯಾಗುವುದಲ್ಲ. ಜೀವನವನ್ನು ಬದಲಾಯಿಸುವ ಹಾಗೂ ನಿಯಂತ್ರಿಸುವ ಮೂಲಕ ವ್ಯಕ್ತಿಯನ್ನು ಶಾಶ್ವತವಾಗಿ ತೃಪ್ತ ಜೀವನ ಅನುಭವಿಸಿ ಸಾಧನೆ ಮಾಡಲು ಪ್ರೇರೇಪಿಸುವ ಶಕ್ತಿ ತುಂಬುವ ಮಹಾನ್ ಅಂಶ ಎಂದು ವಿಶ್ಲೇಷಿಸಿದರು.

ಯುವಕರು ವ್ಯಸನಗಳಿಗೆ ದಾಸರಾಗದೆ ಶ್ರೇಷ್ಠ ಪರಂಪರೆಯಾದ ಸಂಸ್ಕೃತಿ ಅಧ್ಯಾತ್ಮ, ಪರಂಪರೆ ದೇಶದ ನಿಜವಾದ ಇತಿಹಾಸವನ್ನು ಅರಿಯುವ ಮೂಲಕ ಆತ್ಮ ಗೌರವದ ದೇಶವನ್ನು ಹೆಮ್ಮೆಯ ಭಾರತವನ್ನಾಗಿ ರೂಪಿಸಿ ವಿಶ್ವ ಸಮಾಜಕ್ಕೆ ನಮ್ಮ ಕೊಡುಗೆಯನ್ನು ನೀಡುವ ಅನಿವಾರ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಾಂಶುಪಾಲ ಬಿ.ಕೆ.ರಂಗನಾಥ್, ಶಿವರಾತ್ರಿ ಮಹೋತ್ಸವದ ಸುಸಂದರ್ಭದಲ್ಲಿ ನಗರದಲ್ಲಿ ಕಾಶಿಯ ಯಥಾವತ್ ದೇವಾಲಯವನ್ನು ನಿರ್ಮಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪುಸ್ತಕ ಅಧ್ಯಾತ್ಮ ಚಿಂತನೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ಲಕ್ಷ್ಮೀಜಿ , ವಿವಿಧ ವಿಭಾಗದ ಬಿ.ಕೆ.ಶಾರದಾ, ಬಿ.ಕೆ.ಆರಾಧ್ಯ ಇತರರು ಇದ್ದರು.