ಪಾಂಡವಪುರದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉಪವಿಭಾಗಾಧಿಕಾರಿ ನಂದೀಶ್ ಉದ್ಘಾಟಿಸಿದರು. ಎಸ್.ಸಂತೋಷ್, ಲೋಕೇಶ್‌ಮೂರ್ತಿ, ಕ್ಯಾತನಹಳ್ಳಿ ಎಸ್.ದಯಾನಂದ್, ಸುರೇಂದ್ರಕುಮಾರ್, ಎಂ.ಕೆ.ವಿಜಯಕುಮಾರ್, ಎಸ್.ಸಿದ್ದಪ್ಪ ಇದ್ದರು. 
ಜಿಲ್ಲೆ

ಅಧ್ಯಯನದೊಂದಿಗೆ ಪುಸ್ತಕಗಳನ್ನೂ ಪ್ರೀತಿಸುವಂತಾಗಲಿ

ಪಾಂಡವಪುರ: ಮನುಷ್ಯ ಚಂದ್ರಲೋಕಕ್ಕೆ ಕಾಲಿಡುತ್ತಿದ್ದಾನೆ ಎಂದರೆ ಆ ಜ್ಞಾನದ ಹಿಂದೆ ಶಿಕ್ಷಕರ ಪಾತ್ರ ಇದ್ದೇ ಇರುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಶೇಖರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಮಂಗಳವಾರ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರ ಜವಾಬ್ದಾರಿ ತರಗತಿಯ ಕೊಠಡಿಗೆ ಮಾತ್ರ ಸೀಮಿತವಾಗಬಾರದು. ಶಾಲೆಯ ಹೊರಗಡೆಯೂ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಶಿಕ್ಷಕರನ್ನು ನೋಡಿ ಸಮಾಜ ಸಾಕಷ್ಟು ಕಲಿಯುತ್ತಿರುತ್ತದೆ. ಹೀಗಾಗಿ ಶಿಕ್ಷಕರು ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಿಗೆ ಕಲಿಕೆ ನಿರಂತರವಾಗಿರಬೇಕು. ಅಧ್ಯಯನದ ಜತೆಗೆ ಪುಸ್ತಕಗಳನ್ನೂ ಪ್ರೀತಿಸಬೇಕು. ಉತ್ತಮ ರಾಜಕಾರಣಿಗಳನ್ನು ಸೃಷ್ಟಿ ಮಾಡುವುವರು ಶಿಕ್ಷಕರು. ಬಡ ಕುಟುಂಬದಿಂದ ಬಂದ ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕರಾಗಿದ್ದಾರೆ ಎಂದರೆ ಇದಕ್ಕೆ ಶಿಕ್ಷಣ ಕಾರಣವಾಗಿದೆ. ಪ್ರಸ್ತುತ ರಾಜಕಾರಣಿಗಳಿಗೆ ಸಿಗುವ ಪ್ರಾಮುಖ್ಯತೆ ಪ್ರಾಧ್ಯಾಪಕರಿಗೆ ಸಿಗುತ್ತಿಲ್ಲ. ಶಿಕ್ಷಣದಿಂದ ಕೆಟ್ಟ ವಿದ್ಯಾರ್ಥಿಗಳು ಸೃಷ್ಟಿಯಾಗಬಾರದು ಎಂದರು.

ಉಪವಿಭಾಗಾಧಿಕಾರಿ ಎಂ.ಎಲ್.ನಂದೀಶ್ ಮಾತನಾಡಿ, ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತದೆ. ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು ಎಂಬ ಕಾರಣಕ್ಕಾಗಿ ರೈತ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ತೆರಳಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಶಿಕ್ಷಕರಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ಕುಟುಂಬ ವರ್ಗದ ಅಂಗವಿಕಲ ಮಕ್ಕಳಿಗೆ ವ್ಹೀಲ್ ಚೇರ್, ಮೂರು ಚಕ್ರದ ಸೈಕಲ್, ಇತರ ಸಲಕರಣೆಗಳನ್ನು ವಿತರಿಸಲಾಯಿತು. ಬಳಿಕ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್‌ಮೂರ್ತಿ, ಟಿಎಪಿಸಿಎಂಎಸ್ ನಿರ್ದೇಶಕ ಕ್ಯಾತನಹಳ್ಳಿ ಎಸ್.ದಯಾನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಂಜುನಾಥ್, ಉಪನ್ಯಾಸಕರ ಸಂಘದ ಅಧ್ಯಕ್ಷ ರಾಮಕೃಷ್ಣೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಮಂಜುಳಾ, ಇಂದ್ರಕುಮಾರ್, ಸುರೇಂದ್ರಕುಮಾರ್, ಎಂ.ಕೆ.ವಿಜಯಕುಮಾರ್, ಎಸ್.ಸಿದ್ದಪ್ಪ ಇತರರು ಇದ್ದರು.