ಜಿಲ್ಲೆ

ಅಧ್ಯಯನದಲ್ಲಿ ಶ್ರದ್ಧೆ ಇರಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಪರೀಕ್ಷಾ ಭಯ ಮತ್ತು ಒತ್ತಡಕ್ಕೆ ಒಳಗಾಗಿ ಓದದೇ ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರೆ ಯಶಸ್ಸು ಹೊಂದಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಕ್ಲಾಸಿಕ್ ಸಂಸ್ಥೆ ರಜತ ಮಹೋತ್ಸವ ನಿಮಿತ್ತ ಶನಿವಾರ ಕ್ಲಾಸಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ತಪ್ಪಸ್ಸೆಂದು ತಿಳಿದುಕೊಂಡು, ಕಠಿಣ ಪರಿಶ್ರಮದೊಡನೆ ಗುರಿಯೆಡೆಗೆ ಗಮನ ಹರಿಸಬೇಕು. ಶ್ರೇಷ್ಠ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಇತಿಹಾಸ ತಜ್ಞ ಡಾ. ಎಂ.ವೈ. ಸಾವಂತ ಮಾತನಾಡಿ, ಅಧ್ಯಯನಕ್ಕೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹಿಸಿಕೊಂಡು ಸಮಯ ಹೊಂದಾಣಿಕೆಯಿಂದ ವ್ಯವಸ್ಥಿತ ಅಧ್ಯಯನದ ಮೂಲಕ ಗುರಿ ಮುಟ್ಟಬೇಕು ಎಂದರು.
ಉಪನ್ಯಾಸಕ ಭೀಮರೆಡ್ಡಿ, ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ., ವ್ಯವಸ್ಥಾಪಕ ದೀಪಕ ಜೋಡಂಗಿ, ವಿದ್ಯಾರ್ಥಿಗಳು, ಇತರರು ಇದ್ದರು.