ಜಿಲ್ಲೆ

ಅಧ್ಯಯನ ಪ್ರವಾಸಕ್ಕೆ ತೆರಳಿದ ನಗರಸಭೆ ಸದಸ್ಯರು

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಸದಸ್ಯರು ಮತ್ತು ಸಿಬ್ಬಂದಿ ಅಧ್ಯಯನ ಪ್ರವಾಸಕ್ಕಾಗಿ ಕಾರವಾರ ಮತ್ತು ಉಡುಪಿ ನಗರಸಭೆಗೆ ಸೋಮವಾರ ಪ್ರಯಾಣ ಬೆಳೆಸಿದರು.

ಪಟ್ಟಣದ ಸಿಡಿಎಸ್ ಭವನದಲ್ಲಿ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಅಮೃತ ನಿರ್ಮಾಣ ನಗರ ಯೋಜನೆಯ ಅಡಿಯಲ್ಲಿ ಮೂರು ದಿನಗಳ ಅಧ್ಯಯನ ಪ್ರವಾಸಕ್ಕಾಗಿ ಜಿಲ್ಲಾಧಿಕಾರಿ ಅನುಮತಿ ನೀಡಿದ ಮೇರೆಗೆ ಎಲ್ಲ ಸದಸ್ಯರು, ಕೆಲವು ಅಧಿಕಾರಿಗಳು ಪ್ರವಾಸ ಕೈಗೊಂಡಿದ್ದೇವೆ. ಕಾರವಾರ ಮತ್ತು ಉಡುಪಿ ನಗರಸಭೆಗಳಲ್ಲಿ ಕಂದಾಯ ವಸೂಲಾತಿ, ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ ಇನ್ನು ಮುಂತಾದ ಯೋಜನೆಗಳ ನಿರ್ವಹಣೆ ಕುರಿತು ಅಧ್ಯಯನ ಮಾಡಿ ಕೊಳ್ಳೇಗಾಲ ನಗರಸಭೆಯಲ್ಲಿ ಜಾರಿ ಮಾಡಲು ಅಧ್ಯಯನಕ್ಕಾಗಿ ತೆರಳುತ್ತಿದ್ದೇವೆ ಎಂದರು.

ಉಪಾಧ್ಯಕ್ಷ ಎ.ಪಿ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರು, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀಕಂಠ ವಿಭೂತಿ, ಕಿರಿಯ ನಿರೀಕ್ಷಕಿ ಭೂಮಿಕಾ, ಲೆಕ್ಕಾಧಿಕಾರಿ ಹನುಮಂತರಾಜು, ಸಿಬ್ಬಂದಿ ಚಂದನ ಇದ್ದರು.