ಜಿಲ್ಲೆ

ಅಧ್ಯಯನ, ಚಲನಶೀಲ ವ್ಯಕ್ತಿತ್ವದಿಂದ ವಕೀಲ ವೃತ್ತಿ ಯಶಸ್ವಿ

ರಾಯಬಾಗ: ವಕೀಲ ವೃತ್ತಿ ಗೌರವಯುತವಾದದು. ಸತತ ಅಧ್ಯಯನ ಹಾಗೂ ಚಲನಶೀಲ ವ್ಯಕ್ತಿತ್ವ ಹೊಂದಿದ್ದಲ್ಲಿ ಭಾವಿ ಜೀವನ ಉಜ್ವಲವಾಗಿರುತ್ತದೆ ಎಂದು ಹುಕ್ಕೇರಿ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಹಾಗೂ ವಕೀಲೆ ಆಶಾ ಕೋಚರಿಕರ ಹೇಳಿದರು.

ಪಟ್ಟಣದ ಎಸ್‌ಪಿಎಂ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ವಕೀಲ ಮತ್ತು ವೈದ್ಯ ಇರುವುದು ಅವಶ್ಯವಾಗಿದೆ. ವಕೀಲ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿದ್ದು, ಸದುಪಯೋಗ ಪಡೆದು ವೃತ್ತಿ ಜೀವನ ಆರಂಭಿಸಬೇಕು. ಈ ಶಿಕ್ಷಣ ಸಂಸ್ಥೆ ಆಲದ ಮರವಾಗಿ ಬೆಳೆಯಲು ಸಂಸ್ಥಾಪಕ ಅಬಾಜಿ ಪರಿಶ್ರಮವೇ ಕಾರಣವಾಗಿದೆ ಎಂದರು.

ಸಂಸ್ಥೆ ಕಾರ್ಯದರ್ಶಿ ಎಸ್.ಎಸ್.ಶಿಂಗಾಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ಗಳಿಂದ ದೂರವಿದ್ದು, ಓದಿನೆಡೆಗೆ ಗಮನ ಹರಿಸಬೇಕು ಎಂದರು.

ಸಂಸ್ಥೆ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಚಾಲನೆ ನೀಡಿದರು. ಪ್ರಾಚಾರ್ಯೆ ಸುನೀತಾ ಕುರಬೇಟಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಚ್.ನಾಯಿಕ, ಪ್ರೊ. ಎಸ್.ಎಂ. ಲೈನದಾರ, ಪ್ರೊ. ಪಿ.ಆರ್. ಸವದತ್ತಿ, ಉದಯ ಸಣ್ಣಕ್ಕಿ, ಐ.ಆರ್. ಪತ್ತಾರ, ಎಂ.ಆರ್. ಕಠಾರಿ, ರಾಮು ಕಾಕಡೆ ಹಾಗೂ ವಿದ್ಯಾರ್ಥಿಗಳು ಇದ್ದರು.