ಕೊಳ್ಳೇಗಾಲ: ನಗರಸಭೆ ಅಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಸದಸ್ಯೆ ಜಯಮೇರಿ ಅವರಿಗೆ ಸರಿಯಾದ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ನಗರಸಭೆ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಜಯಮೇರಿ ಅವರು ಸಂಚು ರೂಪಿಸಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಆರೋಪಿಸಿದರು.
ಇತ್ತೀಚೆಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಎಸ್ಪಿ ಸದಸ್ಯೆ ಜಯಮೇರಿ ಅವರು ಕೂಡ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಸೂಕ್ತ ಬೆಂಬಲ ಸಿಗದೆ ಅವರು ಅಧ್ಯಕ್ಷೆಯಾಗಲಿಲ್ಲ. ಇದರಿಂದ ಅವರು ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಯುಜಿಡಿ ಕಾಮಗಾರಿ ಹಸ್ತಾಂತರ ಮಾಡಿಕೊಳ್ಳುವ ಸಭೆಯಲ್ಲಿ 31 ಸದಸ್ಯರ ಪೈಕಿ 26 ಸದಸ್ಯರು ಹಾಜರಿದ್ದರು. ಪಕ್ಷಾತೀತವಾಗಿ ಅಂದು ಒಪ್ಪಿಗೆ ನೀಡಲಾಗಿತ್ತು. ಆದರೆ, ಜಯಮೇರಿ ಅವರು ಯುಜಿಡಿ ಕಾಮಗಾರಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆ ದೂರಿನಲ್ಲಿ ನಾನು ಸೇರಿದಂತೆ ಸದಸ್ಯರಾದ ಸುಶೀಲಾ, ಸುಮೇರಾ ಅವರ ಹೆಸರನ್ನು ಸೇರಿಸಿದ್ದಾರೆ. ಆದರೆ ಯುಜಿಡಿ ಕಾಮಗಾರಿ ಹಸ್ತಾಂತರ ಮಾಡಿಕೊಳ್ಳುವ ಸಮಯದಲ್ಲಿ ನಾವುಗಳು ಸದಸ್ಯರೇ ಆಗಿರಲಿಲ್ಲ ಎಂದು ಮಾಹಿತಿ ನೀಡಿದರು.
ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ಮಾತನಾಡಿ, ಮನೆಗಳಿಂದ ಯುಜಿಡಿಗೆ ಸಂಪರ್ಕ ಕೊಟ್ಟ ಹಿನ್ನೆಲೆಯಲ್ಲಿ ಚೇಂಬರ್‌ಗಳು ಉಕ್ಕಿ ಹರಿಯುತ್ತಿತ್ತು. ಇದರಿಂದ ಜನರಿಗೆ ತೊಂದರೆಯಾಗಲಿದೆ. ನಗರಸಭೆಯಿಂದಲೇ ನಿರ್ವಹಣೆ ಮಾಡುವ ನಿರ್ಣಯವನ್ನು ತೆಗೆದುಕೊಂಡು ಹಸ್ತಾಂತರ ಮಾಡಿಕೊಳ್ಳಲಾಯಿತು. ಇದರಲ್ಲಿ ಯಾವುದೇ ಹಗರಣವಾಗಿಲ್ಲ ಎಂದು ಸಮರ್ಥಿಸಿಕೊಂಡರು. ನಗರಸಭೆ ಸದಸ್ಯೆ ರಾಘವೇಂದ್ರ, ಮಂಜುನಾಥ್, ಧರಣೇಶ್, ಪ್ರಕಾಶ್ ಶಂಕನಪುರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿ ಬಸ್ತೀಪುರ ಇತರರು ಇದ್ದರು.