ಚನ್ನರಾಯಪಟ್ಟಣ: ತಾಲೂಕಿನ ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಲಲಿತಾ ಎ.ಆರ್.ನಾರಾಯಣ್, ಉಪಾಧ್ಯಕ್ಷರಾಗಿ ರವಿ ಅವಿರೋಧ ಆಯ್ಕೆಯಾದರು.
ಎ.ಚೋಳೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಎ.ಆರ್.ನಾರಾಯಣ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರವಿ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯೂ ಆದ ಸಹಕಾರ ಇಲಾಖೆ ಅಧಿಕಾರಿ ವಾಸಿಂ ಶರೀಫ್ ಆಯ್ಕೆ ಘೋಷಿಸಿದರು.
ರಾಜ್ಯ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ವಿಜೇತರಿಬ್ಬರನ್ನು ಅಭಿನಂದಿಸಿ ಮಾತನಾಡಿ, ಆಯ್ಕೆಗೆ ಸಹಕರಿಸಿದ ಎಲ್ಲ ನಿರ್ದೇಶಕರು, ಶಾಸಕ ಸಿ.ಎನ್.ಬಾಲಕೃಷ್ಣ, ಸೊಸೈಟಿ ವ್ಯಾಪ್ತಿಯ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ಸಂಸ್ಥೆಗಳು ಸಹಕಾರ ತತ್ವದಡಿ ಕಾರ್ಯನಿರ್ವಹಿಸಿದಾಗ ಸಹಕಾರ ಸಂಸ್ಥೆಗಳು ಉನ್ನತೀಕರಣಗೊಳ್ಳಲು ಸಾಧ್ಯ. ಸೊಸೈಟಿ ಅರ್ಥಿಕವಾಗಿ ಸದೃಢವಾಗಿ ಬೆಳೆದಿದ್ದು, ಸಂಘದಡಿ 7.85 ಕೋಟಿ ರೂ. ಸಾಲ ನೀಡಲಾಗಿದೆ. ಸ್ತ್ರೀ ಶಕ್ತಿ ಸಂಘಗಳಿಗೆ 67 ಲಕ್ಷ ರೂ., 1.75 ಕೋಟಿ ರೂ.ಎಂಟಿಎಲ್ ಸಾಲ ನೀಡಲಾಗಿದೆ. ಚೋಳೇನಹಳ್ಳಿ ಸೊಸೈಟಿಯಿಂದ ಇಷ್ಟು ದೊಡ್ಡ ಮಟ್ಟದ ಸಾಲ ನೀಡಲು ಶಾಸಕ ಸಿ.ಎನ್. ಬಾಲಕೃಷ್ಣ ಅವರು 25 ವರ್ಷಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದು ನಮಗೆ ವರದಾನವಾಗಿದೆ ಎಂದರು.
ನಿರ್ದೇಶಕರಾದ ಧರ್ಮೇಗೌಡ, ದಿನೇಶ್, ಅಂಬರೀಶ್, ಪ್ರತಿಭಾ, ಆಶಾರಾಣಿ, ವೈ.ಎನ್.ಪ್ರದೀಪ್ ಕುಮಾರ್, ಟಿಎಪಿಸಿಎಂಎಸ್‌ನ ಅಧ್ಯಕ್ಷ ಅನಿಲ್ ಮರಗೂರು, ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಮುಖಂಡರಾದ ಎ.ಆರ್.ನಾರಾಯಣ್, ಸಿ.ಕೆ.ಸೋಮಪ್ಪ, ಗನ್ನಿ ವಾಸು, ಜಿ.ಎನ್.ಶ್ರೀನಿವಾಸ್, ಸಿ.ಎನ್.ಕುಮಾರ್, ಸಿ.ಎಸ್.ಕುಮಾರಸ್ವಾಮಿ, ಸಿ.ಎನ್.ಸೋಮಶೇಖರ್, ಗುಳಳ್ಳಿ ನಂಜುಂಡೇಗೌಡ, ಬೆಕ್ಕ ಮಹೇಂದ್ರ, ಸುರೇಶ್, ರಮೇಶ್, ಕುಂಬಾರಹಳ್ಳಿ ಸಂಘದ ಕಾರ್ಯನಿರ್ವಹಣಾಧಿಕಾರಿ ಸಿ.ಎಂ.ರವಿ. ಸಿಬ್ಬಂದಿ ಪ್ರಜ್ವಲ್, ಸುನಿತಾ, ಪವಿತ್ರಾ, ಉಮೇಶ್ ಇದ್ದರು.