ನಂಜನಗೂಡು: ಬಿಳಿಗೆರೆ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ದೊಡ್ಡಯ್ಯ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಗುರುವಾರ ಅಭಿನಂದಿಸಲಾಯಿತು.
ತಾಲೂಕು ಆಡಳಿತಸೌಧದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಅಭಿನಂದಿಸಿ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ನಂಜನಗೂಡು ತಾಲೂಕಿನ ಎಲ್ಲ ಹೋಬಳಿಯಲ್ಲೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ಮಾಡುವಂತೆ ಒತ್ತಾಯ ಮಾಡಿದ್ದೆವು. ಅದರಂತೆ ಬಿಳಿಗೆರೆ ಮತ್ತು ಚಿಕ್ಕಯ್ಯನ ಛತ್ರ ಹೋಬಳಿ ವ್ಯಾಪ್ತಿಯಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ತೆರೆಯಲಾಗಿದೆ. ರೈತರನ್ನು ಆರ್ಥಿಕ ಮಟ್ಟದಿಂದ ಸುಧಾರಿಸಲು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಸಹಕಾರಿಯಾಗಿದೆ. ರೈತರ ಪರವಾಗಿರುವ ದೊಡ್ಡಯ್ಯ ಅವರು ಅಧ್ಯಕ್ಷರಾಗಿದ್ದಾರೆ. ಅವರು ಸಹಕಾರ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಶುಭ ಹಾರೈಸಿದರು.
ನಂತರ ನೂತನ ಅಧ್ಯಕ್ಷ ಎಸ್.ದೊಡ್ಡಯ್ಯ ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘ ಅಭಿವೃದ್ಧಿಪಡಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಕಾರ್ಯದರ್ಶಿ ದೇವರಾಜು, ಕೃಷ್ಣಾಪುರ ಮೋಹನ್, ಸಿದ್ದೇಗೌಡ, ವಳಗೆರೆ ಮಹದೇವಸ್ವಾಮಿ, ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.