ಚಿತ್ರದುರ್ಗ: ಬ್ರಿಜ್ ಭೂಷಣ್ ಶರಣ್ ಸಿಂಗ್‌ರನ್ನು ಕೂಡಲೇ ಬಂಧಿಸಬೇಕು. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು.
ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಬಂಧಿಸಬೇಕೆಂದು ರಾಷ್ಟ್ರಪತಿಗೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು. ಅನೇಕ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ, ಹಿಂಸೆ ನೀಡಿರುವುದು ಅತ್ಯಂತ ಅಘಾತಕಾರಿ. ಇದು ದೇಶವೇ ತಲೆತಗ್ಗಿಸುವಂತ ಘಟನೆ.
ಆದರೆ, ನೊಂದವರು ನೀಡಿದ ದೂರಿನ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಿ ಆರೋಪಿ ಬಂಧಿಸುವ ಬದಲು ರಕ್ಷಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದವರ ಮೇಲೆ ಇಷ್ಟು ಕಿರುಕುಳ ನೀಡಿದರೆ, ಸಾಮಾನ್ಯ ಮಹಿಳೆಯರ ಸ್ಥಿತಿಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯಕ್ಕಾಗಿ ಹೋರಾಟ ಮಾಡುವವರ ಮೇಲೆ ಆಕ್ರಮಣ ಮಾಡುವುದು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಶೋಭೆ ತರುವಂತದಲ್ಲ. ಪ್ರತಿಭಟಿಸುವವರ ಆತ್ಮಸ್ಥೈರ್ಯ ಕಸಿಯುವ ಪ್ರಯತ್ನ ಉತ್ತಮ ಬೆಳವಣಿಗೆಯಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ, ತಪ್ಪು ಸಾಬೀತಾದರೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಅಧಿಕಾರಿ ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧ್ದವೀರಪ್ಪ, ಮುಖಂಡರಾದ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಸದಾಶಿವಪ್ಪ, ಚೇತನ್, ಪರಮೇಶ್ವರಪ್ಪ, ಮಹದೇವಪ್ಪ, ಮಾರುತಿ, ಕಲ್ಲೇಶ್ವರಪ್ಪ, ಸಿದ್ದೇಶ್, ನಾಗರಾಜಪ್ಪ, ಶ್ರೀನಿವಾಸ್ ಇತರರಿದ್ದರು.