ಜಿಲ್ಲೆ

ಅಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ

ಬೆಳಗಾವಿ: ಮಹಾನಗರ ಪಾಲಿಕೆ 23ನೇ ಅವಧಿಯ ನಾಲ್ಕು ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅರ್ಜಿ ಸಲ್ಲಿಸಿದರು. ಈ ಹಿನ್ನೆಲೆ ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಫೀಲುಗಳ ಸಮಿತಿಗೆ ರೇಖಾ ಹೂಗಾರ, ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ ಸಮಿತಿಗೆ ಲಕ್ಷ್ಮೀ ರಾಠೋಡ, ನಗರ ಯೋಜನೆ ಮತ್ತು ನಗರ ಅಭಿವೃದ್ಧಿ ಸಮಿತಿಗೆ ಮಾಧವಿ ಸಾರಂಗ ಹಾಗೂ ಲೆಕ್ಕಪತ್ರ ಸಮಿತಿಗೆ ಬ್ರಹ್ಮಾನಂದ ಮಿರಜಕರ್ ಅವಿರೋಧವಾಗಿ ಆಯ್ಕೆಯಾದರು.

ಎರಡು ಕ್ಷೇತ್ರಗಳಿಗೂ ಹಂಚಿಕೆ: ಮೇಯರ್, ಉಪಮೇಯರ್ ಸ್ಥಾನವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನೀಡಿರುವ ಕಾರಣ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಉತ್ತರ ವಿಧಾನಸಭಾ ಕ್ಷೇತ್ರದವರಿಗೆ ನೀಡುವಂತೆ ಪಕ್ಷದ ವರಿಷ್ಠರ ಮೂಲಕ ಹಾಲಿ, ಮಾಜಿ ಶಾಸಕರ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ, ನಗರ ಮುಖಂಡರು ಒಪ್ಪದಿರುವ ಕಾರಣ ಎರಡು ಕ್ಷೇತ್ರಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ.

ಮೂವರು ಮಹಿಳೆ ಹಾಗೂ ಓರ್ವ ಪುರುಷನಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಸದಸ್ಯರಾದ ವಾಣಿ ವಿಜಾಪುರ, ರವಿ ದೋತ್ರೆ, ರಾಜಶೇಖರ ಡೋಣಿ, ಆಯುಕ್ತ ಶುಭ.ಬಿ ಇತರರಿದ್ದರು.